ADVERTISEMENT

ರಕ್ಷಿಸಿಕೊಳ್ಳಲು ಹಕ್ಕಿಗಳ ಕಸರತ್ತು...!

ಪ್ರಕಾಶ ಮಸಬಿನಾಳ
Published 14 ಅಕ್ಟೋಬರ್ 2012, 5:05 IST
Last Updated 14 ಅಕ್ಟೋಬರ್ 2012, 5:05 IST
ರಕ್ಷಿಸಿಕೊಳ್ಳಲು ಹಕ್ಕಿಗಳ ಕಸರತ್ತು...!
ರಕ್ಷಿಸಿಕೊಳ್ಳಲು ಹಕ್ಕಿಗಳ ಕಸರತ್ತು...!   

ಮಳೆಗಾಲ ಬಂತೆಂದರೆ ಜನರು ತಮ್ಮ ಮನೆಯ ಮೇಲ್ಛಾವಣಿ ದುರಸ್ತಿಗೆ ಮುಂದಾಗುವಂತೆ ಪಕ್ಷಿಗಳು ತಮ್ಮ ಗೂಡಗಳ ರಕ್ಷಣೆ ಮಾಡಿಕೊಳ್ಳುವುದರಲ್ಲಿ ತಲ್ಲೆನವಾಗುತ್ತವೆ. ಅದರಲ್ಲೂ ಗೀಜಗ ಹಕ್ಕಿಗಳು ಮಳೆಯ ನೀರು ಗೂಡಿನ ಒಳಗಡೆ ಬರದ ಹಾಗೇ ರಕ್ಷಿಸಿಕೊಳ್ಳುವುದರಲ್ಲಿ ನಿಪುಣತೆ ಮೆರೆಯುತ್ತವೆ. 

ಬಸವನಬಾಗೇವಾಡಿ ತಾಲ್ಲೂಕಿನ ಜಯವಾಡಗಿ ಗ್ರಾಮದ ಸಮೀಪದ ತೋಟವೊಂದರಲ್ಲಿ ಬಾವಿಯ ಸುತ್ತಲೂ ಇರುವ ಮರಗಳ ರೆಂಬೆಗಳಲ್ಲಿ ಗೀಜಗ ಹಕ್ಕಿಗಳು 25ಕ್ಕೂ ಹೆಚ್ಚು ಗೂಡುಗಳನ್ನು ಕಟ್ಟಿಕೊಂಡಿವೆ. ಇತ್ತೀಚೆಗಷ್ಟೆ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಗೀಜಗಳು ತಮ್ಮ ಗೂಡುಗಳನ್ನು ಭದ್ರವಾಗಿ ನಿರ್ಮಿಸಿಕೊಂಡಿವೆ.

ಸಾಮಾನ್ಯವಾಗಿ ಗೀಜಗ ಹಕ್ಕಿಗಳು ತನ್ನ ಗೂಡುಗಳಿಂದ ವಿಶೇಷತೆ ಪಡೆದುಕೊಂಡಿವೆ. ಮರದ ಕೊಂಬೆಯಿಂದ ಜೋತು ಬಿದ್ದ ಉದ್ದನೆಯ ಗೂಡುಗಳನ್ನು ಕಟ್ಟಿಕೊಂಡಿರುತ್ತವೆ. ಗಂಡು ಗೀಜಗ  ಹುಲ್ಲಿನ ಕಡ್ಡಿ (ತುಂಡು), ಫೈರಿನ ಎಲೆಗಳನ್ನು ಹೆಣೆದು ಸುಸಜ್ಜಿತ ಗೂಡುಗಳನ್ನು ಕಟ್ಟುತ್ತದೆ. ಗೂಡಿನ ಒಳಗಡೆ ಹೋಗಲು ಉದ್ದನೆಯ ಕಿರಿಯಗಲದ ಮಾರ್ಗ ಇರುತ್ತದೆ.  ಹೆಣ್ಣು ಗೀಜಗ ಗೂಡಿನೊಳಗೆ ಮೊಟ್ಟೆ ಇಡಲು ಟೊಳ್ಳು ಆಕಾರದ ಸ್ಥಳ ಇರುತ್ತದೆ.

ನೋಡಿದವರನ್ನು ನಿಬ್ಬೆರಗಾಗಿಸುವಂತೆ ಗೂಡುಗಳನ್ನು ನಿರ್ಮಿಸುವುದರಲ್ಲಿ ಗೀಜಗ ಪಕ್ಷಿಗಳು ಕೌಶಲ ರೂಢಿಸಿಕೊಂಡಿರುತ್ತವೆ. ಮುಖ್ಯವಾಗಿ ಗೀಜಗ ಪಕ್ಷಿಗಳು ಗೂಡುಗಳ ರಕ್ಷಣೆಗಾಗಿ ಸುರಕ್ಷಿತ ಪ್ರದೇಶಗಳನ್ನು ಹುಡುಕುತ್ತವೆ. ಜನರು ಓಡಾಡದ ಅಥವಾ ಜನರಿಂದ ಹಾನಿಗೊಳಗಾದ ಸ್ಥಳದಲ್ಲಿ ಗೂಡು ನಿರ್ಮಿಸಲು ಮುಂದಾಗುತ್ತವೆ. ಮಳೆಗಾಲದಲ್ಲಿ ಒಂದು ಹನಿ ಮಳೆ ನೀರು ಒಳಗೆ ನುಸುಳದಂತೆ ತೀಕ್ಷ್ಣವಾಗಿ ಹೆಣಿಕೆ ಹಾಕುವ ಗೀಜಗಗಳು ಕುಟುಂಬ ರಕ್ಷಣೆಗೆ ಸುರಕ್ಷಿತ ಗೂಡುಗಳನ್ನು ನಿರ್ಮಿಸಿಕೊಂಡಿರುತ್ತವೆ. ಇವುಗಳು ಕಟ್ಟುವ ಗೂಡಿಗೆ ಆಯುಷ್ಯ ಜಾಸ್ತಿ. ಸತತ ದುರಸ್ತಿಯೊಂದಿಗೆ ಹಲವು ವರ್ಷಗಳ ಕಾಲ ಗೂಡಿನಲ್ಲಿ ವಾಸಿಸುತ್ತವೆ.

ನಮ್ಮ ತೋಟದ ಬಾವಿಯ ದಡದಲ್ಲಿ ಇರುವ ಮರಗಳಲ್ಲಿ ಗೀಜಗಗಳು ಗೂಡು ಕಟ್ಟಿಕೊಂಡಿವೆ. ಅವುಗಳು ಇತ್ತೀಚೆಗೆ ಕಟ್ಟಿದ ಗೂಡುಗಳು ಅಲ್ಲ. ಹಲವು ವರ್ಷಗಳಿಂದ ಅಲ್ಲಿ ಗೂಡುಗಳಿವೆ. ಇತ್ತೀಚೆಗೆ ಆರಂಭವಾದ ಮಳೆಯಿಂದಾಗಿ ಕೆಲ ಗೂಡುಗಳು ಹರಿದುಕೊಂಡು ಬಾವಿಯೊಳಗೆ ಬೀಳುವ ಸ್ಥಿತಿಯಲ್ಲಿ ಇದ್ದವು. ಇನ್ನೂ ಕೆಲ ಗೂಡುಗಳಲ್ಲಿ ಮಳೆ  ಹನಿಯ ನೀರು ಸೇರುತ್ತಿದ್ದವು. ಏಕೆಂದರೆ ಗೂಡುಗಳು ಮರದ ಚಿಕ್ಕ ಚಿಕ್ಕ ರೆಂಬೆಗಳಿಗೆ ಹೊಂದಿಕೊಂಡಿವೆ. ಅವುಗಳನ್ನು ಬೇರೆಯವರು  ತೆಗೆಯಲೂ ಬಾರದ ಹಾಗೆ ಬಾವಿಯೊಳಗೆ ಚಾಚಿಕೊಂಡಿರುವ ರೆಂಬೆಗಳಿಗೆ ಗೂಡು ಕಟ್ಟಿವೆ. ಅವುಗಳನ್ನು ಹರಸಾಹಸ ಮಾಡಿ ತೆಗೆದರೂ ನಮಗೆ ಅವುಗಳನ್ನು ಮಳೆಯ ನೀರಿನಿಂದ ರಕ್ಷಿಸಲು ಸಾಧ್ಯವಾಗಲಾರದು. ನಾವು ನಮ್ಮ ಮನೆಗಳನ್ನು ಕಟ್ಟುವ ದುರಸ್ತಿ ಮಾಡುವುದನ್ನು ಕಲಿತಿದ್ದೇವೆ. ಆದರೆ ಗೀಜಗ ಹಕ್ಕಿಗಳ ಗೂಡುಗಳನ್ನು ದುರಸ್ತಿ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ತಮ್ಮ ಗೂಡುಗಳಿಗೆ ಹುಲ್ಲಿನ ಹೇಣಿಕೆಗಳಿಂದ ಹೊದಿಕೆ ಹಾಕಿಕೊಳ್ಳುತ್ತವೆ. ರೆಂಬೆಗಳಿಂದ ಗೂಡು ಕಳಚಿ ಬಿಳದಂತೆ ಗಟ್ಟಿಗೊಳಿಸುತ್ತವೆ ಎಂದು ತೋಟದ ಮಾಲೀಕ ಚಿದಾನಂದ ಪಾಟೀಲ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.