ತಾಳಿಕೋಟೆ: ವಿಶ್ವ ಬ್ಯಾಂಕ್ ನೆರವಿನ ಯೋಜನೆಯೊಂದು ಮನಗೂಳಿ ಯಿಂದ ದೇವಾಪುರ ಕ್ರಾಸ್ ವರೆಗೆ 109 ಕಿಮೀ ಮಂಜೂರಾಗಿದ್ದು ಯೋಜನೆಯಡಿ ರಸ್ತೆ ಮಧ್ಯದಿಂದ ಎರಡೂ ಬದಿಗೆ 12 ಮೀ ಅಗಲದ ವ್ಯಾಪ್ತಿಯೊಳಗೆ ಬರುವ ಮರಗಳನ್ನು ಕತ್ತರಿಸಿ ರಸ್ತೆ ವಿಸ್ತಾರ ಕಾರ್ಯ ಸದ್ದಿಲ್ಲದೆ ಭರದಿಂದ ಸಾಗಿದೆ.
ಪ್ರತಿ ವರ್ಷ ಶ್ರಿಶೈಲ ಜಾತ್ರೆಗೆ ಮಂತ್ರಾಲಯಕ್ಕೆ, ಗುಡ್ಡಾಪುರಕ್ಕೆ ಕೂಡಲಸಂಗಮ, ಪಂಡರಪುರ ಮೊದಲಾದ ಪುಣ್ಯಕ್ಷೇತ್ರಗಳಿಗೆ ತೆರಳುವ ಪಾದಯಾತ್ರಿಗಳಿಗೆ ಈ ಮರಗಳು ನೆರಳಾಗಿ ವಿಶ್ರಾಂತಿ ಧಾಮವಾಗಿದ್ದವು.
ಉತ್ತರ ಕರ್ನಾಟಕದ ಕಡು ಬಿಸಿಲಿನ ಸಮಯದಲ್ಲಿ ದಾರಿ ಹೋಕರಿಗೆ ಪ್ರಾಣಿ ಪಕ್ಷಿಗಳಿಗೆ, ವಾಹನಗಳಿಗೆ ತಂಪಿನೊಂದಿಗೆ ನೆರಳನ್ನೂ ನೀಡಿದ ಮರಗಳು ಅವು. ರಸ್ತೆಯಲ್ಲಿ ಹೋಗುವವರೆಲ್ಲ ಮರಗಳ ಮಾರಣಹೋಮ ಕಂಡು ಮಮ್ಮಲ ಮರುಗಿದರು.
ಇದನ್ನು ಗಮನಿಸಿದ ಬಾಲಕನೊಬ್ಬ ರಸ್ತೆ ವಿಸ್ತರಣೆಯಲ್ಲಿ ಎರಡೂ ಬದಿಯ ಮರಗಳನ್ನು ಕಡಿಯದೇ ಒಂದು ಬದಿಯನ್ನಾದರೂ ಉಳಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಅರಣ್ಯ ಮಂತ್ರಿಗಳಿಗೆ ಹಾಗೂ ಲೋಕೋಪ ಯೋಗಿ ಇಲಾಖೆಗೆ ಪತ್ರ ಬರೆದ ಬಗ್ಗೆ ಹಾಗೂ ಅದಕ್ಕೆ ಸ್ಪಂದಿಸಿದ ಸಚಿವರು ಒಂದೇ ಕಡೆ ಮರಗಳನ್ನು ಕಡಿದು ಇನ್ನೊದು ಕಡೆ ಉಳಿಸುವು ದಾಗಿ ಆಶ್ವಾಸನೆ ಕೊಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆದರೆ ಭರವಸೆ ಭರವಸೆ ಯಾಗಿಯೇ ಉಳಿದಿದೆ ಎನ್ನುವುದು ಈಗಲೂ ಕಣ್ಣಿಗೆ ಕಾಣುವ ಸತ್ಯ. ತಾಳಿಕೋಟೆ ಪಟ್ಟಣದಿಂದ ಹುಣಸಿಗಿ ಮಾರ್ಗದಲ್ಲಿ ಅಂತಹ ದೊಡ್ಡ ಮರಗಳೆನಿಲ್ಲ. ಆದಾಗ್ಯೂ ಅವು ನೆಲಕ್ಕುರುಳುತ್ತಿವೆ. ಒಂದೆ ಬದಿಯಲ್ಲಿ ಮರಗಳನ್ನು ಕಡಿಯುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾತ ನಾಡಿದರೆ ಅವರೂ ನಿಸ್ಸಹಾಯಕರು. ನಮಗೂ ಕರುಳು ಚುರುಕ್ಕನ್ನುತ್ತೆ. ಆದರೆ ಏನು ಮಾಡುವುದು ಹೇಳಿ. ಒಂದು ಬದಿ ಉಳಿಸುವ ಪ್ರಯತ್ನ ಮಾಡಿದರೆ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯ ಬೇಕು ಅದಕ್ಕೆ ರೈತರು ಒಪ್ಪುವುದಿಲ್ಲ.
ಅರಣ್ಯ ಇಲಾಖೆ ಟೆಂಡರ್ ಮಾಡಿಯಾಗಿದ್ದು ಬೇರೆ ದಾರಿಯಿಲ್ಲ. ರಸ್ತೆ ನಿರ್ಮಾಣದ ನಂತರ ಪ್ರತಿ ಒಂದು ಕಿಲೋ ಮೀಟರ್‌ಗೆ 200 ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ಇದೆ ಎಂದು ಹೇಳುತ್ತಾರೆ.
ಆದರೆ ಅವುಗಳು ಎಲ್ಲ ಕೀಟಲೆ ಗಳಿಂದ ತಪ್ಪಿಸಿಕೊಂಡು ಬೆಳೆದು ನೆರಳು ಕೊಡುವ ಹಂತಕ್ಕೆ ಬರುವ ವೇಳೆಗೆ ಕನಿಷ್ಠ 10-15 ವರ್ಷ ವಾದರೂ ಬೇಕು. ಸಾಮಾಜಿಕ ತಜ್ಞರು, ಪರಿಸರವಾದಿಗಳು, ಸ್ವಾಮೀಜಿಗಳು ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.