ADVERTISEMENT

ರೇಷನ್ ಬೇಕಿದ್ದರೆ ಹಕ್ಕುಪತ್ರ; ಘರಪಟ್ಟಿ ತುಂಬಿದರೆ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:00 IST
Last Updated 28 ಅಕ್ಟೋಬರ್ 2011, 9:00 IST

ಆಲಮಟ್ಟಿ: “ಏನ ಮಾಡಬೇಕ್ರಿ ನಾವು ಬಡವರ‌್ರೀ..ಈಗ ರೇಷನ್ ಬೇಕಂದ್ರ ಉತಾರಿ ಕೊಡು ಅಂತಾರಿ ಪಂಚಾಯ್ತ್ಯಾಗ ಕೇಳಿದ್ರ ಬಾಕಿ ಘರಪಟ್ಟಿ ತುಂಬಿ ಹಕ್ಕಪತ್ರ ಒಯ್ಯಿ ಅಂತಾರ‌್ರಿ. ನಾವು ಏನ ಮಾಡಬೇಕ್ರಿ. ಬರಗಾಲ ಬಿದ್ದೈತಿ ಅಂತ ಸರ್ಕಾರನ ಒಪ್ಪಕೊಂಡೈತ್ರಿ. ಈಗ ಘರಪಟ್ಟಿ ತುಂಬು ಅಂದ್ರ ಹ್ಯಾಂಗ್ ತುಂಬಾಕಾಗೂತ್ರಿ” ಈ ರೀತಿಯ ನೂರಾರು ಜನರ ಗೋಳು ಆಲಮಟ್ಟಿ, ನಿಡಗುಂದಿ, ವಂದಾಲ, ಅರಳದಿನ್ನಿ, ಗೊಳಸಂಗಿ ಎಲ್ಲೆಡೆಯೂ ಕೇಳಬರುತ್ತಿದೆ.

ರೇಷನ್ ಬೇಕೆ? ನಿಮ್ಮ ರೇಷನ್ ಕಾರ್ಡ್ ಮುಂದುವರಿಯಬೇಕೆ..? ಹಾಗಿದ್ದಲ್ಲಿ ಗ್ರಾ.ಪಂ.ದಿಂದ ನಿಮ್ಮ ವಾಸಿಸುವ ಮನೆಯ ಹಕ್ಕು ಪತ್ರ ತನ್ನಿ ಎನ್ನುವುದು ಪಡಿತರ ವಿತರಿಸುವವರ ಹೇಳಿಕೆ.

ಉತಾರಿ ಬೇಕೆ ? ಹಾಗಾದರೇ ಘರಪಟ್ಟಿ ಹಾಗೂ ಇನ್ನಿತರ ಕಂದಾಯ ತುಂಬಿ ಎಂಬ ಗ್ರಾ.ಪಂನ ಅಧಿಕಾರಿಗಳ ಹೇಳಿಕೆ ಹಾಗೂ ಹಿರಿಯ ಅಧಿಕಾರಿಗಳ ಈ ಮೌಖಿಕ ಆದೇಶ ಇಡೀ ಗ್ರಾಮೀಣ ಭಾಗದಲ್ಲಿ ತಲ್ಲಣ ಉಂಟು ಮಾಡಿದೆ.

ಪಡಿತರ ಚೀಟಿ ಸಕ್ರಮಗೊಳಿಸಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಸಹಾಯದಿಂದ ಮನೆ ಪಟ್ಟಿ ತಯಾರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಅವುಗಳ ಸತ್ಯಾಸತ್ಯತೆ ಪರೀಕ್ಷಿಸಲು ಹಾಗೂ ಅವರು ಅಲ್ಲಿ ಖಂಡಿತ ವಾಸವಾಗುತ್ತಾರೋ ಇಲ್ಲವೋ ಎಂದು ಅರಿಯಲು ಮನೆಯ ಹಕ್ಕು ಪತ್ರ ತೆಗೆದುಕೊಳ್ಳುವಂತೆ ಮೌಖಿಕ ಆದೇಶ ನೀಡಿದ್ದಾರೆ. ಆದರೆ ವಾಸ್ತವವಾಗಿ ಈ ಕುರಿತು ಯಾವುದೇ ಲಿಖಿತ ಮಾಹಿತಿ ಬಂದಿಲ್ಲ. `ನಮ್ಮ ಮೇಲಿನ ಸಾಹೇಬರು ಹೇಳಿದ್ದಾರೆ. ಅದಕ್ಕಾಗಿ ನಾವು ಹಕ್ಕು ಪತ್ರ ಕೇಳುತ್ತೇವೆ~ ಎಂದು ಪಡಿತರ ವಿತರಿಸುವವರು ಹಾರಿಕೆಯ ಉತ್ತರ ನೀಡುತ್ತಾರೆ.

ಗ್ರಾ.ಪಂ.ದಿಂದ ಹಕ್ಕು ಪತ್ರ ಪಡೆದು ಪಡಿತರ ವಿತರಿಸುವವನಿಗೆ ಕೊಡಲು ಜನತೆ ಗ್ರಾ.ಪಂ.ಗೆ ಮುಗಿಬೀಳುತ್ತಿದ್ದಾರೆ. ಎಲ್ಲಿ ನೋಡಿದರೂ ಪ್ರತಿ ಗ್ರಾ.ಪಂ.ನಲ್ಲಿ ಉತಾರಿ ಹಕ್ಕು ಪತ್ರ ಪಡೆಯಲು ದೊಡ್ಡ ಕ್ಯೂ, ಗಲಾಟೆ ನಡೆಯುತ್ತಿವೆ. ಇನ್ನು ಗ್ರಾ.ಪಂ.ನವರು ಈ ಹಕ್ಕು ಪತ್ರ ನೀಡಲು ಇಲ್ಲಸಲ್ಲದ ಕಾನೂನು ಹೇಳುತ್ತಿದ್ದಾರೆ. ಮೊದಲು ಹಿಂದಿನ ಬಾಕಿ, ಎಲ್ಲಾ ಘರಪಟ್ಟಿ, ಇನ್ನುಳಿದ ಎಲ್ಲಾ ಕಂದಾಯ ಹಣ ಕಟ್ಟಿ ಎಂದು ಗ್ರಾ.ಪಂ.ನವರು ಆದೇಶ ರೂಪವಾಗಿ ಹೇಳುತ್ತಿದ್ದಾರೆ.
 
ಹಣ ಕಟ್ಟದಿದ್ದರೆ ಹಕ್ಕು ಪತ್ರ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಗ್ರಾ.ಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ಘರಪಟ್ಟಿ ಕಟ್ಟಿದಾಗ ಮಾತ್ರ ಹಕ್ಕು ಪತ್ರ ನೀಡಬೇಕೆಂಬ ಯಾವುದೇ ಆದೇಶ ಇಲ್ಲದಿದ್ದರೂ ಗ್ರಾ.ಪಂ.ನವರು ಒತ್ತಾಯಪೂರ್ವಕವಾಗಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆಂದು ಅನೇಕರು ಆರೋಪಿಸುತ್ತಿದ್ದಾರೆ.

ಇದರಿಂದಾಗಿ ಬಡವರು ಅದರಲ್ಲಿಯೂ ಬಿಪಿಎಲ್ ಕಾರ್ಡ್ ಹೊಂದಿದ ಬಹುತೇಕರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕನಿಷ್ಠ ಏನಿಲ್ಲ ಎಂದರೂ  ರೂಪಾಯಿ ಸಾವಿರದಿಂದ  ಎರಡು ಸಾವಿರದವರೆಗಾದರೂ ಬಾಕಿ ಹಣ ಇದ್ದು ಅದನ್ನು ಒಂದೇ ಕಂತಿನಲ್ಲಿ ಕಟ್ಟಲು ಜನತೆಗೆ ತೊಂದರೆಯಾಗುತ್ತಿದೆ.

ಹಕ್ಕು ಪತ್ರ ಏಕೆ ನೀಡಬೇಕು? ಬೇಕಾದರೆ ಮನೆ ಮನೆಗೆ ಬಂದು ಸಮೀಕ್ಷೆ ಮಾಡಲಿ. ಖೊಟ್ಟಿಯಾಗಿದ್ದರೆ ಪಡಿತರ ಚೀಟಿ ರದ್ದುಪಡಿಸಲಿ.  ಮೊದಲು ಗ್ಯಾಸ್ ಸಿಲಿಂಡರ್‌ಗಾಗಿ ಸತಾಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ರೇಷನ್ ಕಾರ್ಡ್‌ಗಾಗಿ ಸತಾಯಿಸುತ್ತಿದೆ. ಹಕ್ಕು ಪತ್ರ ನೀಡದಿದ್ದರೆ ರೇಷನ್ ಕೂಡ ಕೊಡುವುದನ್ನು ಬಂದ್ ಮಾಡುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ಬಹುತೇಕರು ಪ್ರಶ್ನಿಸುತ್ತಿದ್ದಾರೆ.

ಪುನರ್ವಸತಿ ಕೇಂದ್ರಗಳ ಸಮಸ್ಯೆ 
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾಧಿತವಾದ ಸಂತ್ರಸ್ತರು ವಾಸಿಸುವ ಪುನರ್ವಸತಿ ಕೇಂದ್ರಗಳನ್ನು ಗ್ರಾ.ಪಂ.ಗೆ ಇನ್ನೂ ಹಸ್ತಾಂತರಿಸಿಲ್ಲ.  ಅವರಿಗೂ ಗ್ರಾ.ಪಂ.ನಿಂದಲೇ ಪಡೆದ ಹಕ್ಕು ಪತ್ರ ನೀಡಿದರೆ ಮಾತ್ರ ರೇಷನ್ ನೀಡುವುದಾಗಿ ಪಡಿತರ ವಿತರಿಸುವವರು ಹೇಳುತ್ತಿದ್ದಾರೆ.

ಈಗ ಗ್ರಾ.ಪಂ ನಂ. 9 ರೆಜಿಸ್ಟರ್‌ನಲ್ಲಿ ನಮೂದು ಮಾಡದೇ ಉತಾರಿ ಕೊಡಲು ಬರುವುದಿಲ್ಲ. ಹೀಗಾಗಿ ನಂ. 10 ರೆಜಿಸ್ಟರ್‌ನಲ್ಲಿ ನಮೂದಿಸಿ ಕಂದಾಯ ತುಂಬಿಸಿ ಕೊಂಡು ರಸೀದಿ ನೀಡುತ್ತಿದ್ದಾರೆ. ಅದನ್ನು ನೀಡಿದಾಗ ಮಾತ್ರ ಪಡಿತರ ನೀಡಲಾಗುತ್ತಿದೆ.  ಗ್ರಾ.ಪಂಗೆ ಇನ್ನೂ ಪುನರ್ವಸತಿ ಕೇಂದ್ರಗಳನ್ನು ಹಸ್ತಾಂತರಿಸಿಲ್ಲ.
 
ಆ ಕೇಂದ್ರಗಳ ಅಭಿವೃದ್ಧಿ ಉಸ್ತುವಾರಿ ಇನ್ನೂ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಇಲಾಖೆಗೆ ಸೇರಿದೆ.  ಹೀಗಾಗಿ ನಾವೇಕೆ ಗ್ರಾ.ಪಂಗೆ ಕರ ಪಾವತಿಸಬೇಕು ಎಂಬುದು ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಸ್ಥೆಯ ಆರೋಪ. 

ಮೊದಲೇ ಬರಗಾಲ ಬಿದ್ದಿದೆ. ದೀಪಾವಳಿ ಹಬ್ಬ ಬಂದಿದೆ. ಇಂಥಾ ಸ್ಥಿತಿಯಲ್ಲಿ ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮೌಖಿಕ ಆದೇಶಕ್ಕೆ ಇಷ್ಟೇಕೆ ಬೆಲೆ ನೀಡುತ್ತಿದ್ದಾರೆಂದು ಸಂಸ್ಥೆಯ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಆರೋಪಿಸುತ್ತಾರೆ.

ಹಕ್ಕು ಪತ್ರ ಕಡ್ಡಾಯವಾಗಿ ಬೇಕೆಂದರೆ ಲಿಖಿತ ಆದೇಶ ಮಾಡಿ ಹಾಗೂ ಪುನರ್ವಸತಿ ಕೇಂದ್ರಗಳ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿ ಎನ್ನುತ್ತಾರೆ ಅವರು.  ಹಕ್ಕು ಪತ್ರ ನೀಡಲು ಒತ್ತಾಯಪೂರ್ವಕವಾಗಿ ಕಂದಾಯ ತುಂಬಿಸಿಕೊಳ್ಳುವುದು ಯಾವ ನ್ಯಾಯ? ಎನ್ನುತ್ತಾರೆ ಅವರು. ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ ಎಂದು ಜನತೆ ಆಗ್ರಹಿಸಿದೆ.

ಎಸ್‌ಕೆ ಬೆಳ್ಳುಬ್ಬಿ ಒತ್ತಾಯ
ಪುನರ್ವಸತಿ ಕೇಂದ್ರಗಳ ಹಾಗೂ ಗ್ರಾಮೀಣ ಬಡ ಜನತೆಯ ಸಮಸ್ಯೆಯ ಬಗ್ಗೆ ಅರಿವಿರುವ ಶಾಸಕ ಎಸ್.ಕೆ. ಬೆಳ್ಳುಬ್ಬಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿ ಹರೀಶಗೌಡ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿ ದಯಾನಂದ ಅವರಿಗೆ ಮನವಿ ಅರ್ಪಿಸಿದ್ದಾರೆ.

ದೀಪಾವಳಿ ಹಬ್ಬ ಹಾಗೂ ಬರಗಾಲ ಹಿನ್ನೆಲೆಯಲ್ಲಿ ರೇಷನ್ ವಿತರಿಸಬೇಕು. ರೇಷನ್ ನೀಡಲು ಗ್ರಾ.ಪಂದಿಂದ ಹಕ್ಕು ಪತ್ರ ಪಡೆಯಬಾರದು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.