ADVERTISEMENT

ರೈಲ್ವೆ ಇಲಾಖೆಯ ನಿರ್ಲಕ್ಷ್ಯ:2500 ಎಕರೆ ಭೂಮಿ ನೀರಾವರಿಯಿಂದ ವಂಚಿತ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:15 IST
Last Updated 19 ಅಕ್ಟೋಬರ್ 2012, 5:15 IST

ಆಲಮಟ್ಟಿ: ಇಲ್ಲಿ ಕಾಲುವೆ ನಿರ್ಮಾಣವಾಗಿದೆ, ಆದರೂ ನೀರು ಹರಿಯುತ್ತಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದವರು ಇದಕ್ಕೆ ಹಣವನ್ನು ನೀಡಿದ್ದಾರೆ. ಆದರೆ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೃಷ್ಣಾ ತೀರದ ಸುಮಾರು 2500 ಎಕರೆಗೂ ಅಧಿಕ ಜಮೀನು ನೀರಾವರಿಯಿಂದ ವಂಚಿತಗೊಂಡಿದೆ.

ಮುಳವಾಡ ಏತ ನೀರಾವರಿಯ ಪೂರ್ವ ಕಾಲುವೆಯ ವಿತರಣಾ ಕಾಲುವೆ 6ರ ಮುಂದುವರಿದ ಕಾಮಗಾರಿಯ ವಂದಾಲ ಸಮೀಪದ ರೇಲ್ವೆ ಹಳಿ ದಾಟಿಸುವ ಕಾಮಗಾರಿ ಆರಂಭಗೊಳ್ಳದಿರುವುದೇ ಈ ವಿಳಂಬಕ್ಕೆ ಕಾರಣವಾಗಿದೆ. ಕಾಲುವೆಗಳು ನಿರ್ಮಾಣಗೊಂಡು ಒಂದೂವರೆ ವರ್ಷ ಗತಿಸಿದರೂ, ಕಾಲುವೆಗೆ ನೀರಿನ ಭಾಗ್ಯ ದೊರೆತಿಲ್ಲ. ಅದಕ್ಕೆ ಕಾರಣ ನೈಋತ್ಯ ರೇಲ್ವೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ.

ಯೋಜನೆಯ ವಿವರ: ಆಲಮಟ್ಟಿಯ ಹಿನ್ನೀರಿನ ಕೃಷ್ಣಾ ತೀರದ ಭೂಮಿಗಳಿಗೆ ನೀರುಣಿಸಲು ಮುಳವಾಡ ಏತ ನೀರಾವರಿಯ ಪೂರ್ವ ಕಾಲುವೆಯ ವಿತರಣಾ ಸಂಖ್ಯೆ 6ನ್ನೂ ಮುಂದುವರಿಕೆ ಕಾಮಗಾರಿ 2009ರಲ್ಲಿಯೇ ಪ್ರಾರಂಭಗೊಂಡಿತು. ಕೇಂದ್ರ ಸರಕಾರದ ಎ.ಐ.ಬಿ.ಪಿ. ಅನುದಾನದಡಿ ತ್ವರಿತಗತಿ ನೀರಾವರಿ ಯೋಜನೆಯಡಿ ರೂ. 3.25 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ 8 ಕಿ.ಮೀ ವಿತರಣಾ ಕಾಲುವೆ, 15 ಕಿ.ಮೀ ವ್ಯಾಪ್ತಿಯ ಮೂರು ಪ್ರತ್ಯೇಕ ತೂಬು ಕಾಲುವೆ (ಲ್ಯಾಟರಲ್) ನಿರ್ಮಾಣಗೊಂಡಿದೆ. ಅದಕ್ಕಾಗಿ ಹೊಲಗಾಲುವೆಯನ್ನು ನಿರ್ಮಿಸಲಾಗಿದೆ.

ಸಮೀಪದ ಕೃಷ್ಣಾ ತೀರದ ಗ್ರಾಮಗಳಾದ ವಂದಾಲ, ಗುಡದಿನ್ನಿ, ಅಂಗಡಗೇರಿ, ಹುಣಶ್ಯಾಳ ಪಿಸಿ ಗ್ರಾಮ ಹಾಗೂ ಪುನರ್ವಸತಿ ಕೇಂದ್ರವಾದ ಬೇನಾಳ ಆರ್.ಎಸ್‌ದ ಅಂದಾಜು  1049 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಈ ಕಾಲುವೆ ಕಾಮಗಾರಿಯನ್ನು  2009 ರಲ್ಲಿಯೇ ಕೈಗೆತ್ತಿಕೊಳ್ಳಲಾಯಿತು. ನಿಗದಿತ ಅವಧಿಯಲ್ಲಿ ಅಂದರೆ 2011 ಫೆಬ್ರುವರಿಯಲ್ಲಿಯೇ ಕಾಲುವೆ ಕಾಮಗಾರಿ ಮುಕ್ತಾಯಗೊಂಡರೂ, ಇನ್ನೂ ಈ ಕಾಲುವೆಗೆ ನೀರು ಹರಿಯುವ ಭಾಗ್ಯ ಕೂಡಿಬಂದಿಲ್ಲ. ಇದು ರೈತರಲ್ಲಿ ತಳಮಳ ಸೃಷ್ಟಿಸಿದೆ.

ಕಾರಣವಾದರೂ ಏನು..? ವಂದಾಲ ರೈಲು ನಿಲ್ದಾಣ ಪಕ್ಕದಲ್ಲಿ ಹಾಯ್ದು ಹೋಗುವ ಮುಳವಾಡ ಏತ ನೀರಾವರಿಯ ಪೂರ್ವ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ 6ನ್ನು  ವಿಸ್ತರಿಸಲು ರೇಲ್ವೆ ಹಳಿ ಅಡ್ಡಲಾಗುತ್ತಿದೆ. ಕಾರಣ ಅಲ್ಲಿ ಸೇತುವೆ ನಿರ್ಮಾಣದ ಕಾರ್ಯವನ್ನು ರೇಲ್ವೆ ಇಲಾಖೆಗೆ ಮಾಡಬೇಕು.
 
ರೈಲ್ವೆ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಆಗಮಿಸಿ ಸೇತುವೆ ನಿರ್ಮಾಣಕ್ಕೆ ಯೋಜನಾ ವಿವರ ಹಾಗೂ ಅಂದಾಜು ಪತ್ರಿಕೆ ತಯಾರಿಸಿ ಕೆಬಿಜೆಎನ್‌ಎಲ್‌ಗೆ ನೀಡಿದೆ. ರೈಲ್ವೆ ಇಲಾಖೆಯ ಬೇಡಿಕೆಯಂತೆ 2010ರಲ್ಲಿಯೇ ರೇಲ್ವೆ ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ರೂ. 60ಲಕ್ಷ ಅನ್ನು ಕೆಬಿಜೆಎನ್‌ಎಲ್ ರೈಲ್ವೆ ಇಲಾಖೆಗೆ 2010 ಡಿಸೆಂಬರ್‌ನಲ್ಲಿಯೇ ಪಾವತಿಸಿದೆ. 

ಈ ಕಾಮಗಾರಿ ಆರಂಭಿಸಬೇಕಿದ್ದ ರೇಲ್ವೆ ಇಲಾಖೆ ಇತ್ತ ಕಡೆ ಕಣ್ತೆರೆದು ನೋಡಿಲ್ಲ.  ಕೆಬಿಜೆಎನ್‌ಎಲ್ ನಿಂದ ಹಣ ಕಟ್ಟಿಸಿಕೊಂಡು ಎರಡು ವರ್ಷ ಗತಿಸಿದರೂ ಸಹಿತ  ಕಾಮಗಾರಿ ಆರಂಭದ ಸುಳಿವೆಯೇ ಇಲ್ಲ.
ಈ ಕುರಿತು ನಿಗಮದ ಎಂಜಿನಿಯರ್‌ರು ಹಲವಾರು ಬಾರಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಎಂಜಿನಿಯರ್ ಕಚೇರಿ (ಪೂರ್ವ) ಕಚೇರಿಗೆ ತೆರಳಿ ಮನವಿ ಮಾಡಿದರೂ ಸಹಿತ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ನಿಗಮದ ಅಧಿಕಾರಿಗಳು. 

ರೈಲ್ವೆ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಕೃಷ್ಣಾ ತೀರದ ಸುಮಾರು ಐದು ಗ್ರಾಮಗಳಿಗೆ ಜೀವ ಜಲ ಹರಿಯಬೇಕಿದ್ದ ಕಾಲುವೆಗಳು ಕಳೆದ ಒಂದೂವರೆ ವರ್ಷದಿಂದ ಬರಡಾಗಿವೆ. ಮಣ್ಣಿನಿಂದ ಕಾಲುವೆಗಳು ಮುಚ್ಚಿ ಹೋಗುವ ಹಂತದಲ್ಲಿವೆ ಎನ್ನುತ್ತಾರೆ ವಂದಾಲ ಗ್ರಾಮಸ್ಥರು.

ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ: ಬೆಳ್ಳುಬ್ಬಿ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಈ ವಿಷಯದ ಬಗ್ಗೆ ರೈಲ್ವೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಅವರ ಬೇಡಿಕೆಗೆ ತಕ್ಕಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಹಣವನ್ನು ಸಹ ಕಟ್ಟಿದ್ದಾರೆ, ಇಷ್ಟಿದ್ದರೂ ರೈಲ್ವೆ ಇಲಾಖೆಯವರು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆನ್ನುವುದು ಗೊತ್ತಾಗುತ್ತಿಲ್ಲ.

ಆದರೂ ಇನ್ನೊಂದು ಬಾರಿ ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳ ತಂಡವನ್ನು ಹುಬ್ಬಳ್ಳಿಗೆ ಕಳುಹಿಸಿ ರೇಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.