ADVERTISEMENT

ಲಂಬಾಣಿ ದಿರುಸು ಮೆರಗು- ಮಾರಾಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:07 IST
Last Updated 24 ಫೆಬ್ರುವರಿ 2018, 6:07 IST
ಚಂದ್ರಗಿರಿ ಚಂದ್ರಮ್ಮಾದೇವಿ ಜಾತ್ರೆಗೆ ಮಾರಾಟಕ್ಕೆ ಬಂದಿರುವ ಲಂಬಾಣಿ ಪೋಷಾಕುಗಳು
ಚಂದ್ರಗಿರಿ ಚಂದ್ರಮ್ಮಾದೇವಿ ಜಾತ್ರೆಗೆ ಮಾರಾಟಕ್ಕೆ ಬಂದಿರುವ ಲಂಬಾಣಿ ಪೋಷಾಕುಗಳು   

ಆಲಮಟ್ಟಿ (ನಿಡಗುಂದಿ): ಇಲ್ಲಿಯ ಚಂದ್ರಗಿರಿಯ ಚಂದ್ರಮ್ಮಾ ಜಾತ್ರೆ ಅಂಗವಾಗಿ ವಿವಿಧ ಅಂಗಡಿಗಳು ಬಂದಿದ್ದು, ಲಂಬಾಣಿ ಪೋಷಾಕುಗಳ ಮಾರಾಟ ಮಳಿಗೆಗಳು ಗಮನ ಸೆಳೆಯುತ್ತಿವೆ.

ಜಾತ್ರೆಗೆ ಸರ್ವ ಧರ್ಮೀಯರು ಬಂದಿದ್ದರೂ, ಲಂಬಾಣಿ ಜನರು ಧರಿಸುವ ಬಟ್ಟೆಗಳು, ಸಾಂಪ್ರದಾಯಿಕ ಪೋಷಾಕುಗಳ ಸಾಮಗ್ರಿಗಳು ಮಾರಾಟಕ್ಕಾಗಿ 10ಕ್ಕೂ ಹೆಚ್ಚು ಮಾರಾಟ ಅಂಗಡಿಗಳು ಬಂದಿದ್ದು, ಲಂಬಾಣಿ ಪೋಷಾಕುಗಳನ್ನು ಖರೀದಿಸುವಲ್ಲಿ ಜನ ಜಂಗುಳಿಯೂ ಹೆಚ್ಚಿದೆ.

ಲಂಬಾಣಿ ಜನರು ತೊಡುವ ವಿವಿಧ ಬೆಳ್ಳಿಯ ಆಭರಣಗಳು, ಗೆಜ್ಜೆಗಳು ಗಮನ ಸೆಳೆಯುತ್ತಿವೆ. ವಿವಿಧ ಆಕಾರದ ರವಿಕೆಗಳು, ಪೋಷಾಕುಗಳಿಗೆ ಹಚ್ಚುವ ವೃತ್ತಾಕಾರದ ಚಿಕ್ಕ ಚಿಕ್ಕ ಕನ್ನಡಿಗಳು ಮಾರಾಟದ ವಿಶೇಷಗಳಾಗಿವೆ.

ADVERTISEMENT

ಸೊಲ್ಲಾಪುರ, ವಿಜಯಪುರ, ಬರಟಗಿ ತಾಂಡಾದಿಂದ ಜನರು ಮಾರಾಟಕ್ಕೆ ಬಂದಿದ್ದಾರೆ. ಮಾರಾಟಗಾರರಾದ ಮಂಗಲಿಬಾಯಿ ಲಮಾಣಿ, ಝಮಲಿಬಾಯಿ ಲಮಾಣಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಲಂಬಾಣಿ ದಿರಿಸು ಹಳೆ ಸಂಪ್ರದಾಯ ತೊಡುಗೆಯಾಗಿತ್ತು. ಬರಬರುತ್ತಾ ಆ ಪೋಷಾಕು ಹಾಕುವ ಜನ ಕಡಿಮೆಯಾದರೂ, ಈಗ ಅದನ್ನು ಫ್ಯಾಶನ್ ರೂಪದಲ್ಲಿ ಹಾಕುತ್ತಿದ್ದಾರೆ. ಆದರೂ ಸಣ್ಣ ಪುಟ್ಟ ವ್ಯಾಪಾರ ನಡೆಯುತ್ತಿದೆ’ ಎಂದರು.

ಬುಟ್ಟಿಗಳು: ಜಾತ್ರೆಗೆ ಜನಜುಂಗಳಿ ಹೆಚ್ಚಿರುವ ಕಾರಣ ಇಲಕಲ್ಲ, ಬಾಗಲಕೋಟೆ ಸೇರಿದಂತೆ ನಾನಾ ಕಡೆಯಿಂದ ಬಿದುರಿನಿಂದ ಮಾಡಿದ ಬುಟ್ಟಿಗಳು, ಮರ ಮೊದಲಾದ ವಸ್ತುಗಳು ಹೆಚ್ಚಾಗಿ ಬಂದಿವೆ. ಅದನ್ನು ಖರೀದಿಸುವವರೂ ಹೆಚ್ಚಾಗಿದ್ದಾರೆ. ಉಳಿದಂತೆ ಮಿಠಾಯಿ, ಆಟದ ಸಾಮಗ್ರಿಗಳು, ಬಾಂಡೆ ಅಂಗಡಿ, ವಿವಿಧ ಹಣ್ಣುಗಳ ಜ್ಯೂಸ್‌್ ಅಂಗಡಿ ಸೇರಿದಂತೆ ಒಂದು ಕಿ.ಮೀ ಉದ್ದದವರೆಗೂ ಅಂಗಡಿಗಳು ಬಂದಿವೆ.

ತರಹೇವಾರಿ ವಸ್ತುಗಳ ಬಿಕರಿ

ಹಳೆ ಕಾಲದ ನಾಣ್ಯಗಳನ್ನು ಹಚ್ಚಿರುವ (ನಾಲ್ಕಾಣೆ, ಎಂಟಾಣೆ) ಲಂಗ ಚೋಲಿಗಳು, ರೂಪಿಯಾ, ಸಮುದ್ರದ ವಿವಿಧ ಶಂಖಗಳು, ಕಾಂಚಳಿ, ಫೇಕಿಯಾ, ಪಾಂಬಡಿ, ಕೈಗೆ ಹಾಕಿಕೊಳ್ಳುವ ವಿವಿಧ ಚೂಡಿ, ಕಾಲಿಗೆ ಹಾಕುವ ಕಸೆ, ಮೂಗಿಗೆ ಹಾಕುವ ಮುರಿಯಾ, ಕೂದಲಿಗೆ ಹಾಕುವ ಚೋಟಲಿಗಳು, ಕೊರಳಿಗೆ ಹಾಕುವ ಪಟಿಯಾಗಳು, ಗೆಜ್ಜೆ, ಚೈನ್‌ ಸೇರಿದಂತೆ ಲಂಬಾಣಿ ಉಡುಗೆ– ತೊಡುಗೆಗಳು ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.