ADVERTISEMENT

ಲಂಬಾಣಿ ಭಾಷಾ ಅಕಾಡೆಮಿ ರಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 6:55 IST
Last Updated 14 ಮಾರ್ಚ್ 2011, 6:55 IST

ವಿಜಾಪುರ: ರಾಜ್ಯದಲ್ಲಿ ಬಂಜಾರಾ ಜನರ ಸಂಸ್ಕೃತಿ, ಸಂಸ್ಕೃತಿ ಅಧ್ಯಯನ ಮತ್ತು ಉಳಿವಿಗಾಗಿ ‘ಲಂಬಾಣಿ ಭಾಷಾ ಅಕಾಡೆಮಿ’ ರಚಿಸಬೇಕು ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ರಾಮಾನಾಯಕ, ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ನಡೆದ ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯ ಮಟ್ಟದ ಪ್ರಥಮ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಅವರು ಮಾತನಾಡಿದರು. ರಾಜ್ಯದಲ್ಲಿ ಬಂಜಾರಾ ಸಮಾಜದ ಸಂಘಟನೆಗಾಗಿ ಜಿಲ್ಲೆ, ತಾಲ್ಲೂಕು, ತಾಂಡಾಗಳಲ್ಲಿ ಬಂಜಾರಾ ಸೇವಾ ಸಂಘದ ಸಮಿತಿ ರಚಿಸಿ ಸದಸ್ಯ ಅಭಿಯಾನ ನಡೆಸಲಾಗುವುದು. ಬಂಜಾರಾ ಸಮಾಜದ ಅಭಿವೃದ್ಧಿಗಾಗಿ ಬಂಜಾರಾ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಿದ್ದು, ಈ ನಿಗಮದಿಂದ ಬರುವ ಅನುದಾನದಲ್ಲಿ ರಾಜ್ಯದ ಎಲ್ಲ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಸಮಾಜದ ಪ್ರಮುಖರು ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.

ಲಂಬಾಣಿ ಸಂಸ್ಕೃತಿ ಉಳಿಸಿ, ಬೆಳೆಸಲು ಹಂಪಿಯಲ್ಲಿ ಲಂಬಾಣಿಗರ ಉಡುಗೆ- ತೊಡುಗೆ ತಯಾರಿಸುವ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 10 ಎಕರೆ ಭೂಮಿ ನೀಡಬೇಕು.ಲಂಬಾಣಿಗರ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಲಂಬಾಣಿ ಭಾಷಾ ಅಕಾಡೆಮಿ ರಚಿಸಲು ರಾಜ್ಯ ಸರ್ಕಾರಕ್ಕೆ ಸಮಾಜ ಬಾಂಧವರು ಒಗ್ಗಟ್ಟಿನಿಂದ ಒತ್ತಾಯಿಸಬೇಕಿದೆ ಎಂದರು.

ಲಂಬಾಣಿ ಸಮಾಜ ಬಾಂಧವರ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ದಿ.ಕೆ.ಟಿ. ನಾಯಕ ಅವರ ಭಾವಚಿತ್ರವನ್ನು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದೂ ಅವರು ಮನವಿ ಮಾಡಿದರು.ಅಖಿಲ ಭಾರತ ಬಂಜಾರಾ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ. ಸದಸ್ಯ ದೇವಾನಂದ ಚವ್ಹಾಣ, ಬಂಜಾರಾ ನೌಕರರ ಸಂಘದ ಅಧ್ಯಕ್ಷ ಬಿ.ಬಿ. ನಾಯಕ, ಪಾಂಡುರಂಗ ಪಮ್ಮಾರ, ಉಮೇಶ ಜಾಧವ, ವೈ.ಆರ್. ಲಮಾಣಿ, ಜೀವಲಪ್ಪ ಲಮಾಣಿ ಮುಂತಾದವರು ಪಾಲ್ಗೊಂಡಿದ್ದರು. ಪೀರ್ಯಾ ನಾಯಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.