ADVERTISEMENT

`ಲೇಖನಿ ಸಮಾಜದ ಬದಲಾವಣೆಗೆ ಬಳಸಿ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 5:47 IST
Last Updated 3 ಏಪ್ರಿಲ್ 2013, 5:47 IST

ವಿಜಾಪುರ: `ಮನುಷ್ಯ ಸಮಾಜ ಜೀವಿ. ನಾವು ಸಮಾಜದಿಂದ ವಿಮುಖರಾಗಿ ಬದುಕಲು ಸಾಧ್ಯವಿಲ್ಲ. ಸಾಹಿತಿಗಳು ತಮ್ಮ ಲೇಖನಿಯನ್ನು ಸಮಾಜದ ಬದಲಾವಣೆಗೆ ಬಳಿಸಿದರೆ ಅದು ನಿಜವಾಗಲೂ ಉನ್ನತ ಸಾಹಿತ್ಯವಾಗಲು ಸಾಧ್ಯ' ಎಂದು ಬೆಂಗಳೂರಿನ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಸಂಚಾಲಕಿ ಕೆ. ಉಮಾ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ `6ನೇ ವಿಜಾಪುರ ಸಾಂಸ್ಕೃತಿಕ ಜನೋತ್ಸವ' ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿಜಾಪುರದ ಜನತೆಯ ಬೆಂಬಲದಿಂದ ಪ್ರತಿವರ್ಷ ಯಶಸ್ವಿಯಾಗಿ ನಡೆಯುತ್ತಿರುವ ಈ ಸಾಂಸ್ಕೃತಿಕ ಜನೋತ್ಸವ, ಇನ್ನು ಹೆಚ್ಚಿನ ಪ್ರಗತಿಪರ ವಿಚಾರಗಳನ್ನು ಹರಡಲು ವರ್ಷಕ್ಕೆ ಮೂರ‌್ನಾಲ್ಕು ಬಾರಿ  ನಡೆಯುವಂತಾಗಬೇಕು ಎಂದರು.

ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಆರ್. ಸುನಂದಮ್ಮ, `ಮಹಿಳೆಯರೆಲ್ಲರೂ ಈ ವರ್ಷ ತೀವ್ರವಾದ ನೋವಿನಲ್ಲಿ ಬದುಕುತ್ತಿದ್ದೇವೆ. ದೆಹಲಿಯ ಸಾಮೂಹಿಕ ಅತ್ಯಾಚಾರದ ಘಟನೆ ನಮ್ಮಲ್ಲಿ ಹೊಸ ಹೋರಾಟ, ಚಿಂತನೆಗಳನ್ನು ಹುಟ್ಟುಹಾಕಿದೆ.

ಹಿಂಸೆಯಿಲ್ಲದ ಸಂಸ್ಕೃತಿ ಸೃಷ್ಟಿಸಲು ಇಂತಹ ಕಾರ್ಯಕ್ರಮಗಳು ದೊಡ್ಡ ಸ್ಪೂರ್ತಿ ನೀಡುತ್ತವೆ' ಎಂದು ಹೇಳಿದರು. ಆವಿಷ್ಕಾರ ಜಿಲ್ಲಾ ಘಟಕದ ಸಂಚಾಲಕ ಸಂಗಾರೆಡ್ಡಿ ದೇಸಾಯಿ ಮಾತನಾಡಿದರು. ಎಐಡಿಎಸ್‌ಓನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಟಿ. ಭರತ್‌ಕುಮಾರ ಅಧ್ಯಕ್ಷತೆ ವಹಿಸಿದ್ದರು.ನಂತರ ಆವಿಷ್ಕಾರ ತಂಡದವರು `ಕಿಡಿಯಾದಳು ಹುಡುಗಿ' ಎಂಬ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT