ADVERTISEMENT

`ಲೋಕಸಭೆ: ಕಾಂಗ್ರೆಸ್‌ನಿಂದ 17 ಅರ್ಜಿ ಸ್ವೀಕಾರ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:25 IST
Last Updated 5 ಆಗಸ್ಟ್ 2013, 5:25 IST

ವಿಜಾಪುರ: `ಜಾಫರ್ ಷರೀಫ್ ನಂತರ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಖಾತೆ ಸಚಿವರಾಗಿರುವುದು ರಾಜ್ಯದ ಸುಯೋಗ. ಮುಂದೆ ಇಂತಹ ಅವಕಾಶ ಸಿಗಲಿಕ್ಕಿಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ರೂ1,000 ಕೋಟಿ ಹಣವನ್ನು ರೈಲ್ವೆ ಇಲಾಖೆಯಲ್ಲಿ ಠೇವಣಿ ಇಟ್ಟು, ನಮ್ಮ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಕೊಳ್ಳಬೇಕು' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

`ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸುವ ಯೋಜನೆಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದೆ. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಈ ವರೆಗೆ ಕೇವಲ ರೂ.30 ಕೋಟಿ ಹಣ ನೀಡಿದೆ ಎಂದು ರೈಲ್ವೆ ಸಚಿವರೇ ಹೇಳಿದ್ದಾರೆ. ತಕ್ಷಣವೇ ಸಾವಿರ ಕೋಟಿ ಕೊಟ್ಟು ಖರ್ಗೆ ಅವರಿಂದ ಕೆಲಸ ಮಾಡಿಸಿಕೊಳ್ಳಬೇಕು' ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

`ಕೆಜೆಪಿಯನ್ನು ಯಾವ ಪಕ್ಷದಲ್ಲೂ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಪ್ರಯತ್ನಕ್ಕೆ ಯಾರೂ ಮುಂದಾಗುವುದು ಬೇಡ. ಜೆಡಿಎಸ್ ಸೇರಿದಂತೆ ನಮಗೆ ಯಾವ ಪಕ್ಷವೂ ಅಸ್ಪೃಶ್ಯ ಅಲ್ಲ. ಮುಂಬರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿ ಅವಲೋಕಿಸಿ ನಮಗೆ ಲಾಭ ಆಗುವ ಹಾಗೆ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇವೆ' ಎಂದರು.

`ವಿಜಾಪುರ ಸೇರಿದಂತೆ ನಮ್ಮ ಶಕ್ತಿ ಇರುವ ರಾಜ್ಯದ 10ರಿಂದ 12 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ಆರಂಭಿಸಿದ್ದೇವೆ. ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ರಾಷ್ಟ್ರ ರಾಜಕಾರಣದಲ್ಲೂ ನಾವು ಪ್ರಮುಖ ಪಾತ್ರ ವಹಿಸಲಿದ್ದೇವೆ' ಎಂದು ಹೇಳಿದರು.

`ಮಂಡ್ಯ, ರಾಮನಗರ ಲೋಕಸಭಾ ಉಪ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನೂ ನಿರ್ಧರಿಸಿಲ್ಲ. ಧಾರವಾಡ ಮತ್ತು ಮೈಸೂರು ವಿಧಾನ ಪರಿಷತ್ ಕ್ಷೇತ್ರಗಳ ಉಪ ಚುನಾವಣೆಗೆ ಸ್ಪರ್ಧಿಸಿದ್ದು, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ' ಎಂದು ಹೇಳಿದರು.

ಆಂದೋಲನ: ಸಾವಯವ ಕೃಷಿ ಮಿಷನ್ ಸೇರಿದಂತೆ ನಾನು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಜನಪ್ರಿಯ ಯೋಜನೆಗಳನ್ನು ಮುಂದಿನ ಯಾವ ಸರ್ಕಾರಗಳೂ ರದ್ದು ಪಡಿಸಲು ಆಗುವುದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಜನರೇ ಬೀದಿಗಿಳಿಯುತ್ತಾರೆ. ಈ ಯೋಜನೆಗಳ ಮುಂದುವರಿಕೆಗಾಗಿ ನಮ್ಮ ಪಕ್ಷದಿಂದಲೂ ಆಂದೋಲನ ನಡೆಸುತ್ತೇವೆ ಎಂದರು.

ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಲು ನಮ್ಮ ಪಕ್ಷದ ಅಭ್ಯಂತರ ಇಲ್ಲ. ಹೊಸ ತಾಲ್ಲೂಕು, ಹೊಸ ಜಿಲ್ಲೆಗಳ ರಚನೆಗೆ ನನ್ನ ವಿರೋಧವೂ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಠ್ಠಲ ಕಟಕಧೋಂಡ, ಡಾ.ಬಾಬು ನಾಗೂರ, ಕಾಶೀನಾಥ ಮಸಬಿನಾಳ, ಪಾಟೀಲ, ರವಿ ಖಾನಾಪೂರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು. ನಂತರ  ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಸಂಗರಾಜ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.