ADVERTISEMENT

‘ವಾಲ್ಮೀಕಿ ವಿಚಾರಧಾರೆ ಇಂದಿಗೂ ಪ್ರಸ್ತುತ'

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:39 IST
Last Updated 16 ಅಕ್ಟೋಬರ್ 2017, 9:39 IST

ವಿಜಯಪುರ: ‘ಮಹರ್ಷಿ ವಾಲ್ಮೀಕಿ ಐತಿಹಾಸಿಕ ವ್ಯಕ್ತಿ. ಏಕ ಕಾಲದಲ್ಲಿ ಮಹಾ ಕವಿಯಾಗಿ, ಮಹಾ ಋಷಿಯಾಗಿ, ದಾರ್ಶನಿಕನಾಗಿ, ಮಹಾ ಸಂತರಾದ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ತಿಳಿಸಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ/ಪಂಗಡ ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ವಾಲ್ಮೀಕಿ ವಿಚಾರಧಾರೆ’ ಎಂಬ ವಿಷಯದ ಕುರಿತು ಪೂಜಾರಹಳ್ಳಿ ಉಪನ್ಯಾಸ ನೀಡಿದರು.

‘ರಾಮಾಯಣದ ಪ್ರತಿ ಪದಕ್ಕೂ ಅರ್ಥವಿದೆ, ಇತಿಹಾಸವಿದೆ. ವಾಲ್ಮೀಕಿ ಒಬ್ಬ ಶ್ರೇಷ್ಠ ಚಿಂತಕ, ಋಷಿಯಾಗಿ, ದಾರ್ಶನಿಕನಾಗಿ, ತತ್ವಜ್ಞಾನಿಯಾಗಿ, ಶಿಕ್ಷಕನಾಗಿ ಬೆಳೆದವರು. ಸಮಾಜಮುಖಿಯಾದ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ADVERTISEMENT

ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಆರ್ಥಿಕ ಅಧಿಕಾರಿ ಪ್ರೊ.ಆರ್.ಸುನಂದಮ್ಮ ಮಾತನಾಡಿ ‘ಅಘೋಚರವಾದ ವಿಚಾರಗಳನ್ನು, ನಮ್ಮೊಳಗಿರುವ ಅಸ್ಮಿತೆಯನ್ನು ಬಗೆದು ನೋಡುವುದು ಮುಖ್ಯವಾಗಿದೆ. ಕಣ್ಮರೆಯಾದ ಚರಿತ್ರೆಯನ್ನು ಕಂಡುಕೊಳ್ಳುವ ಕೆಲಸ ಮಾಡುವುದು ಅವಶ್ಯಕವಾಗಿದೆ. ಜತೆಗೆ ಕಳೆದು ಹೋಗಿರುವ ಇಂತಹ ಚಿಂತನೆಗಳನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಸನ್ನದ್ಧರಾಗಬೇಕು’ ಎಂದು ಹೇಳಿದರು.

ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ-–ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಡಾ.ಹನುಮಂತಯ್ಯ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಶಾಂತಮ್ಮ ಮೇಟಿ ನಿರೂಪಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ.ಸಕ್ಪಾಲ್ ಹೂವಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.