ADVERTISEMENT

ವಿಜಾಪುರ-ಗದಗ ಹೊಸ ರೈಲು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:10 IST
Last Updated 13 ಜುಲೈ 2012, 8:10 IST

ವಿಜಾಪುರ: ಗದಗ-ವಿಜಾಪುರ ಮಧ್ಯೆ ಹೊಸ ವಿಶೇಷ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವಿಜಾಪುರ ಬ್ರಾಡ್‌ಗೇಜ್ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ ಭಾವಿ ತಿಳಿಸಿದ್ದಾರೆ.

ರದ್ದು ಮಾಡಿರುವ ಹುಬ್ಬಳ್ಳಿ-ವಿಜಾಪುರ-ಹುಬ್ಬಳ್ಳಿ ರೈಲನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಕಚೇರಿ ಎದುರು ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದ ತಮ್ಮಂದಿಗೆ ಚರ್ಚಿಸಿದ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಜಾಪುರದಿಂದ ಗದಗ ವರೆಗೆ ಒಂದು ರೈಲು ಓಡಿಸಲುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಹೋರಾಟ ಸಮಿತಿಗೆ ಸಂದ ಜಯ. ಈ ರೈಲನ್ನು ಹುಬ್ಬಳ್ಳಿ ವರೆಗೆ ವಿಸ್ತರಿಸಬೇಕು ಹಾಗೂ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಹಂಪಿ ಎಕ್ಸಪ್ರೆಸ್ ರೈಲಿಗೆ ಗದಗದಲ್ಲಿ ಸಂಪರ್ಕ ಸಾಧ್ಯವಾಗುವಂತೆ ಮಾಡಬೇಕು ಎಂಬ ಕೋರಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ರೈಲು ಸಂಚಾರ ಕುರಿತು ಶೀಘ್ರವೇ ಪ್ರಕಟಣೆ ಹೊರಬೀಳಲಿಗೆ ಎಂದಿದ್ದಾರೆ.

ಇಬ್ರಾಹಿಂಪೂರ ರೈಲು ನಿಲ್ದಾಣ ಎಫ್ ಕೆಟಗರಿಯಲ್ಲಿದ್ದು, ಈ ಹಾಲ್ಟ್ ಸ್ಟೇಶನ್ ವಿಜಾಪುರದಿಂದ ಕೇವಲ 4 ಕಿ.ಮೀ. ಅಂತರದಲ್ಲಿ ಇರುವುದರಿಂದ ಎಲ್ಲ ರೈಲುಗಳಿಗೆ ನಿಲುಗಡೆ ಕಲ್ಪಿಸಲು ರೈಲ್ವೆ ಕಾಯ್ದೆಯಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಲಾಪುರ-ಹುಬ್ಬಳ್ಳಿ ಇಂಟರ್‌ಸಿಟಿ ಒಂದಕ್ಕಾಗದರೂ  ಇಬ್ರಾಹಿಂಪೂರ ರೈಲು ನಿಲ್ದಾಣದಲ್ಲಿ ಒಂದು  ನಿಮಿಷ ನಿಲುಗಡೆಗೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.

ಹುಟಗಿ-ಗದಗ ನಡುವಿನ ಮಾರ್ಗ ಕೇವಲ 60 ಕಿ.ಮೀ. ವೇಗಕ್ಕೆ ಮಂಜೂರಿ ಇದ್ದು,  ಈ ಮಾರ್ಗದಲ್ಲಿ ವೇಗವನ್ನು 100 ಕಿ.ಮೀ.ಗೆ ಹೆಚ್ಚಿಸುವ ಮತ್ತು ಹೊಸ ಸಿಗ್ನಲ್ ವ್ಯವಸ್ಥೆ ಕಾಮಗಾರಿಗಳು ಜನವರಿ 2013ಕ್ಕೆ ಮುಗಿಯಲಿವೆ. ಈ ಮಾರ್ಗದಲ್ಲಿ ವೇಗ ಹೆಚ್ಚಿಸಿದರೆ ಎರಡು ಗಂಟೆ ಉಳಿಯಲಿದ್ದು, ರಾತ್ರಿ 8ಕ್ಕೆ ವಿಜಾಪುರ ಬಿಟ್ಟು ಬೆಳಿಗ್ಗೆ ಯಶವಂತಪೂರ ತಲುಪಲು ಸಾಧ್ಯವಾಗಲಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕಾಗಿ 20 ಸಾವಿರ ಕ್ಯೂಬಿಕ್ ಅಡಿ ಜಲ್ಲಿಯನ್ನು ವಂದಾಲದಲ್ಲಿ ಸಂಗ್ರಹಿಸಿ ನಂತರ ಟ್ರ್ಯಾಕ್‌ಗೆ ಹಾಕಿದಾಗ ವೇಗ ಹೆಚ್ಚಳ ಸಾಧ್ಯವಾಗಲಿದೆ. ಈ ಮಾರ್ಗದ ವೇಗ ಹೆಚ್ಚಿದ ನಂತರವೇ ಮತ್ತೆ ಅನೇಕ ರೈಲುಗಳನ್ನು ಓಡಿಸುವುದಾಗಿ  ಅವರು ಮಾಹಿತಿ ನೀಡಿದ್ದಾಗಿ ಭಾವಿ ತಿಳಿಸಿದ್ದಾರೆ.

ಮಂತ್ರಾಲಯ ರೋಡ್ ಸ್ಟೇಶನ್‌ನಲ್ಲಿ ನೀರಿಗಾಗಿ ರೈಲು ನಿಲ್ಲುತ್ತಿದ್ದರೂ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿಲ್ಲ. ಅಲ್ಲಿಗೆ ಟಿಕೆಟ್ ಕೊಡಬೇಕು ಕೋರಲಾಯಿತು.ಮಂತ್ರಾಲಯ ರೋಡ್ ಸ್ಟೇಶನ್ ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿದ್ದು, ಆ ವಲಯದೊಂದಿಗೆ ಸಂಪರ್ಕಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.