ADVERTISEMENT

ವಿಜಾಪುರ ಜಿ.ಪಂ.ಗೆ ಶಂಕ್ರುಬಾಯಿ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 5:45 IST
Last Updated 16 ಮಾರ್ಚ್ 2011, 5:45 IST

ವಿಜಾಪುರ: ವಿಜಾಪುರ ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಯ ನೂತನ ಅಧ್ಯಕ್ಷೆಯಾಗಿ ಮುದ್ದೇಬಿಹಾಳ ತಾಲ್ಲೂಕು ಬಸರಕೋಡ ಮತಕ್ಷೇತ್ರದ ಬಿಜೆಪಿ ಸದಸ್ಯೆ ಶಂಕ್ರುಬಾಯಿ ಬಸವರಾಜ ಚಲವಾದಿ ಹಾಗೂ ಉಪಾಧ್ಯಕ್ಷರಾಗಿ ಚಡಚಣ ಮತಕ್ಷೇತ್ರದ ಪಕ್ಷೇತರ ಸದಸ್ಯ ಶ್ರೀಶೈಲಗೌಡ ಶಂಕ್ರೆಪ್ಪ ಬಿರಾದಾರ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಒಟ್ಟು 38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಸರಕೋಡ ಮತಕ್ಷೇತ್ರದಿಂದ ಆಯ್ಕೆಯಾಗಿರುವ ಬಿ.ಜೆ.ಪಿ.ಯ ಶಂಕ್ರುಬಾಯಿ ಬಸವರಾಜ ಚಲವಾದಿ ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರ ಆಯ್ಕೆ ಅವಿರೋಧವಾಗಿ ನಡೆಯಿತು.


ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚಡಚಣದ ಸದಸ್ಯ ಶ್ರೀಶೈಲಗೌಡ ಶಂಕ್ರಪ್ಪ ಬಿರಾದಾರ, ಕಾಂಗ್ರೆಸ್‌ನ ಮನಗೂಳಿ ಮತಕ್ಷೇತ್ರದ ಚಂದ್ರಶೇಖರಗೌಡ ಸೋಮನಗೌಡ ಪಾಟೀಲ, ಪಾಟೀಲ ಶರಣಗೌಡ ಪಾಟೀಲ, ನಾಡಗೌಡ ಗಂಗಾಧರ ಶಂಕರಗೌಡ, ಉಮೇಶ ಮಲ್ಲಿಕಾರ್ಜುನ ಕೊಳಕೂರ ಹೀಗೆ ಐವರು ನಾಮಪತ್ರ ಸಲ್ಲಿಸಿದ್ದರು.
ಕೊನೆಯ ಕ್ಷಣದಲ್ಲಿ ಶ್ರೀಶೈಲಗೌಡ ಶಂಕ್ರೆಪ್ಪ ಬಿರಾದಾರ ಹಾಗೂ ಚಂದ್ರಶೇಖರ ಸೋಮನಗೌಡ ಹೊರತುಪಡಿಸಿ ಉಳಿದವರು ನಾಮಪತ್ರ ಹಿಂಪಡೆದರು. ಚುನಾವಣೆಯಲ್ಲಿ  ಇಬ್ಬರೂ ಅಭ್ಯರ್ಥಿಗಳಿಗೆ ತಲಾ 19 ಮತಗಳು ಪ್ರಾಪ್ತವಾದವು.


ಸಮಬಲದ ಕಾರಣ ಅಂತಿಮವಾಗಿ ಚೀಟಿ ಎತ್ತುವುದರ ಮೂಲಕ ಫಲಿತಾಂಶ ಪ್ರಕಟಿಸಲು ಚುನಾವಣಾಧಿಕಾರಿ ಆಗಿರುವ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ ನಿರ್ಧರಿಸಿದರು.ಈ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಒಂದು ಡಬ್ಬದಲ್ಲಿ ಹಾಕಲಾಯಿತು. ಸಾಲೋಟಗಿ ಮತಕ್ಷೇತ್ರದ ಸದಸ್ಯೆ ಸೌಮ್ಯ ಕಲ್ಲೂರ ಅವರ ಐದು ಪುತ್ರಿ ಸಲೋನಿ ಕಲ್ಲೂರ ಮೂಲಕ ಚೀಟಿ ಎತ್ತಿಸಲಾಯಿತು. ಅದೃಷ್ಟ ಬಿಜೆಪಿ ಪರವಾಗಿತ್ತು.

ಪಕ್ಷೇತರ ಸದಸ್ಯ ಶ್ರೀಶೈಲಗೌಡ ಬಿರಾದಾರ ಅವರಿಗೆ ಚೀಟಿಯ ಮೂಲಕ ಅದೃಷ್ಟ ಒಲಿದು ಬಂದಿತ್ತು. ಹೀಗಾಗಿ ಶ್ರೀಶೈಲಗೌಡ ಬಿರಾದಾರ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಂ. ಶಿರೋಳ ಪ್ರಕಟಿಸಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯ
ಹೆಚ್ಚುವರಿ ಆಯುಕ್ತ ಎಂ.ಜಿ. ತೋರಗಲ್, ಅಪರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ, ಜಿ.ಪಂ. ಸಿಇಒ ಎ.ಎನ್. ಪಾಟೀಲ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.