ADVERTISEMENT

ವಿಜಾಪುರ ಜಿಲ್ಲೆ: 468 ‘ಗಣಪತಿಗಳು ಸೂಕ್ಷ್ಮ ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:42 IST
Last Updated 13 ಸೆಪ್ಟೆಂಬರ್ 2013, 8:42 IST

ವಿಜಾಪುರ: ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪಿಸಿ­ರುವ ಗಣೇಶ ವಿಗ್ರಹಗಳ ಸಂಖ್ಯೆ 1552. ಅವುಗಳಲ್ಲಿ 149 ಗಣಪತಿಗಳು ಅತೀ ಸೂಕ್ಷ್ಮ ಮತ್ತು 319 ಗಣಪತಿಗಳು ಸೂಕ್ಷ್ಮ!

ಅರೆರೆ ಇದೇನಿದು? ಚುನಾವಣೆಯ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ವಿಂಗಡಿಸಿದಂತೆ ಗಣಪತಿಗೂ ಈ ‘ಕಳಂಕ’ವೆ ಎಂದು ಪ್ರಶ್ನಿಸುತ್ತೀರಾ?

ಈ ‘ಕಳಂಕ’ ಹೇಗೆ ಬಂದಿದೆಯೋ ಗೊತ್ತಿಲ್ಲ. ಜಿಲ್ಲಾ ಪೊಲೀಸ್‌ ಇಲಾಖೆ ಮಾತ್ರ ಭದ್ರತೆಯ ದೃಷ್ಟಿಯಿಂದ ಗಣೇಶೋತ್ಸವ ಮಂಡಳಿಗಳನ್ನು ಈ ರೀತಿ ವಿಂಗಡಿಸಿದೆ.

ಅತೀ ಸೂಕ್ಷ್ಮ–ಸೂಕ್ಷ್ಮ ಪಟ್ಟಿಯಲ್ಲಿ ವಿಜಾಪುರ ನಗರದ ಗಣಪತಿಗಳಿಗೆ (200) ಸಿಂಹಪಾಲು. ವಿಜಾಪುರ ನಗರ ಮತ್ತು ತಾಲ್ಲೂಕಿನಲ್ಲಿ 519, ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ 639, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ 394 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಅವುಗಳಲ್ಲಿ 835 ಗಣೇಶ ವಿಗ್ರಹಗಳನ್ನು ಐದನೇ ದಿನವಾದ ಇದೇ 13ರಂದು, 481 ಗಣೇಶ ವಿಗ್ರಹಗಳನ್ನು ಏಳನೇ ದಿನವಾದ ಇದೇ 15ರಂದು ವಿಸರ್ಜಿಸಲಾ­ಗುತ್ತದೆ. ಒಂಬತ್ತನೇ ದಿನ 151, 11ನೇ ದಿನ 77 ಗಣೇಶ ವಿಗ್ರಹಗಳ ವಿಸರ್ಜನೆ ನಡೆಯಲಿದೆ ಎಂಬುದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ ಅವರ ಮಾಹಿತಿ.

‘ಗಣೇಶೋತ್ಸವ ಭದ್ರತೆಗೆ ಡಿಎಆರ್‌ನ 12, ಐಆರ್‌ಬಿಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ. 550 ಪೊಲೀಸರು ಹಾಗೂ 300 ಜನ ಹೋಮ್‌ಗಾರ್ಡ್ ಗಳ ಸೇವೆ ಪಡೆದುಕೊಳ್ಳಲಾಗುತ್ತಿದೆ.

ವಿಶೇಷವಾಗಿ ಮತೀಯ ಸೂಕ್ಷ್ಮ ಸ್ಥಳಗಳಲ್ಲಿ ವಿಶೇಷ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದು, ಕಂದಾಯ ಇಲಾಖೆಯಿಂದ ಸಮನ್ವಯ ಅಧಿ­ಕಾರಿ­ಗಳನ್ನು ನೇಮಿಸಲಾಗಿದೆ. ತುರ್ತು ಸೇವೆಗಾಗಿ ಅಗಿ್ನಶಾಮಕ ವಾಹನ ಹಾಗೂ ವೈದ್ಯಕೀಯ ಅಂಬುಲೆನ್ಸ್‌ನ್ನು ಗಾಂಧಿಚೌಕ್‌ ಪೊಲೀಸ್‌ ಠಾಣೆ ಆವರಣದಲ್ಲಿ ಕಾಯ್ದಿರಿಸಲಾಗಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹಾಗೂ ನಗರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಗಣೇಶೋತ್ಸವ ಮತ್ತು ಮೆರವಣಿಗೆಯ ಸಂದರ್ಭದಲ್ಲಿ ಹಿಂದೆ ಆಗಿರುವ ಘಟನಾವಳಿ ಆಧರಿಸಿ, ಜನ ಹೆಚ್ಚಿಗೆ ಸೇರುವುದು, ಆ ಸ್ಥಳದ ಪರಿಸ್ಥಿತಿಯ ಹಿನ್ನೆಲೆ ಗಮದಲ್ಲಿಟ್ಟುಕೊಂಡು ಸೂಕ್ಷ್ಮ–ಅತೀ ಸೂಕ್ಷ್ಮ ಗಣೇಶ ಎಂದು ಪರಿಗಣಿಸ­ಲಾಗಿದೆ. ಅವುಗಳಿಗೆ ವಿಶೇಷ ಭದ್ರತೆ ಒದಗಿಸ­ಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಫ್‌.ಎ. ಟ್ರಾಸ್ಗರ್‌ ತಿಳಿಸಿದರು.

ಮೆರವಣಿಗೆ ಮಾರ್ಗ: ವಿಜಾಪುರ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಗೆ ಪೊಲೀಸ್‌ ಇಲಾಖೆ ಮಾರ್ಗ ನಿಗದಿ ಮಾಡಿದೆ.

ವಾಟರ್‌ ಟ್ಯಾಂಕ್‌, ಶಾಸ್ತ್ರಿ ನಗರ, ಗ್ಯಾಂಗ್‌ ಬಾವಡಿ, ಟ್ರೇಝರಿ ಕಾಲೊನಿ, ಜೋರಾಪೂರ ಪೇಟೆಗಳಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ತಾಜ್‌ಬಾವಡಿಗೆ ವಿಸರ್ಜನೆ ಮಾಡುವ ಕಾಲಕ್ಕೆ ವಾಟರ್ ಟ್ಯಾಂಕ್‌, ಶಿವಾಜಿ ಸರ್ಕಲ್‌ನಿಂದ ಮಲೀಕ್‌–ಎ–ಮೈದಾನ ತೋಪು ರಸ್ತೆ ಮೂಲಕ ಉಪ್ಪಲಿ ಬುರ್ಜ್‌, ಅಜಾದ್ ರೋಡ, ಮಿಲನ್ ಬಾರ್ ಕ್ರಾಸ್, ಸರಾಫ್ ಬಜಾರ್, ಹೆಗಡೆವಾರ್ ಕ್ರಾಸ್, ಸಿದ್ದೇಶ್ವರ ಗುಡಿ ರಸ್ತೆ, ಶಾಸ್ತ್ರಿ ಮಾರ್ಕೆಟ್, ಗಾಂಧಿ ಚೌಕ್, ನಗರಸಭೆ, ಶಿವಾಜಿ ಚೌಕ್, ಗುಂಡಬಾವಡಿ ಮೂಲಕ ತಾಜಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಪೊಲೀಸ್‌ ಇಲಾಖೆ ಸೂಚನೆ ನೀಡಿದೆ.

ಮೂರ್ತಿಗಳ ವಿಸರ್ಜನೆಗೆ ತಾತ್ಕಾಲಿಕ ಹೊಂಡ
ವಿಜಾಪುರ: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ವಿಜಾಪುರ ನಗರದಲ್ಲಿ ನಗರಸಭೆ ತಾತ್ಕಾಲಿಕ ವ್ಯವಸ್ಥೆ ಮಾಡಿದೆ ಎಂದು ಪೌರಾಯುಕ್ತ ರಾಮದಾಸ ತಿಳಿಸಿದ್ದಾರೆ.

ಜಲನಗರ ಮಂಗಲ ಕಾರ್ಯಾಲಯ, ಗೋದಾವರಿ ನೀರಿನ ಟ್ಯಾಂಕ್, ಕಲ್ಯಾಣ ನಗರ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಕೃತಕ ಗಣೇಶ ವಿಸರ್ಜನಾ ಸ್ಥಳಗಳನ್ನು ನಿರ್ಮಿಸಲಾಗಿದೆ.

ನಗರದ ಸೋಲಾಪುರ ರಸ್ತೆಯಲ್ಲಿರುವ ಕೆ.ಎಚ್.ಬಿ. ಕಾಲೊನಿಯ ಶಾಲೆಯ ಬಳಿ, ಆದರ್ಶ ನಗರದ ನಗರಸಭೆ ಕಾಂಪ್ಲೆಕ್ಸ್ ಹತ್ತಿರ, ಬಿ.ಎಲ್.ಡಿ.ಇ. ಎಂಜಿನಯರಿಂಗ್ ಕಾಲೇಜಿನ ಎದುರು, ಮನಗೂಳಿ ರಸ್ತೆಯ ಬಿ.ಡಿ.ಎ. ಕಚೇರಿ ಹತ್ತಿರ ಹಾಗೂ ಭೈರವ ನಗರದಲ್ಲಿ ಸಂಚಾರ ವಿಸರ್ಜನಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.