ADVERTISEMENT

ವಿಜಾಪುರ ನರಗಸಭೆ ಮೇಲ್ದರ್ಜೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:47 IST
Last Updated 25 ಜೂನ್ 2013, 4:47 IST

ಬೆಳಗಾವಿ: `2011ರ ಜನಗಣತಿ ಆಧರಿಸಿ ವಿಜಾಪುರ, ತುಮಕೂರು ಹಾಗೂ ಶಿವಮೊಗ್ಗ ನಗರಸಭೆಗಳನ್ನು ಮಹಾನಗರ ಪಾಲಿಕೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವ ಇದೆ. ಸದ್ಯ ದಲ್ಲಿಯೇ ಈ ಕುರಿತ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈ ಮೂರು ನಗರಸಭೆಗಳಿಗೆ ಮುಂಬರುವ ದಿನಗಳಲ್ಲಿ ವಿಶೇಷ ಅನುದಾನ ನೀಡಲಾಗುವುದು ಎಂದ ಅವರು, ಜನಸಂಖ್ಯೆ ಆಧಾರದ ಮೇರೆಗೆ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶವಿದೆ. ಮುಖ್ಯಮಂತ್ರಿಗಳ ಜೊತೆಗೆ ನಡೆದ ಬಜೆಟ್ ಪೂರ್ವ ಚರ್ಚೆಯಲ್ಲಿ ಅನು ದಾನ ಒದಗಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು. 

ಪಾಲಿಕೆಗಳ ಮೇಯರ್, ಉಪ ಮೇಯರ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಅಂತಿಮ ಗೊಳಿಸಲಾಗಿದೆ. ಆದರೆ, ಬಿಬಿಎಂಪಿಯ ಮೀಸಲಾತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಪ್ರಕರಣ ಇತ್ಯರ್ಥವಾದ ನಂತರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು.  ಶೇ. 50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಹ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದ್ದು, ಮುಂದಿನ ವಾರ ಈ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ವರ್ಗಾವಣೆಗೆ ವೃಂದ ಹಾಗೂ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶವಿದೆ. ಹಲವಾರು ವರ್ಷಗಳಿಂದ ಒಂದೇ ಕಡೆ ಇದ್ದ ಸಿಬ್ಬಂದಿಯನ್ನು ಬೇರೆ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಆಡಳಿತಕ್ಕೆ ಹೊಸ ಚೈತನ್ಯ ತರಲು ಪ್ರಯತ್ನಿಸಲಾಗುವುದು ಎಂದು ಸೊರಕೆ ಹೇಳಿದರು.

ಅತಿಕ್ರಮಣವಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಲು ಉನ್ನತಾಧಿ ಕಾರ ಸಮಿತಿ ರಚಿಸಲಾಗಿದೆ. ಈ ಸಮಿತಿಯ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡಿ ಪರಿಶೀಲಿ ಸಲಾಗುವುದು. ಪಾಲಿಕೆಗಳಿಗೆ ಹಿಂದಿನ ಸರ್ಕಾರ ನೀಡಿರುವ 100 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮುಂದುವರಿ ಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಹಿತ್ಯ ಸಮ್ಮೇಳನ
ಮುಧೋಳ: ಜಿಲ್ಲೆಯ ಪ್ರಥಮ ಕಸಾಪ ಭವನದ ಉದ್ಘಾಟನೆ ಸಮಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಕಸಾಪ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಹೇಳಿದರು.

ಪಟ್ಟಣದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಕಟಗಿಹಳ್ಳಿ ಮಠ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಅನ್ನದಾನಿ ಹಿರೇಮಠ, ತಾಲ್ಲೂಕು ಅಧ್ಯಕ್ಷ ಸಿದ್ದಣ್ಣ ಬಾಡಗಿ. ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಮೇಲಿನಮನಿ,  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT