ಮಡಿಕೇರಿ: ಮಡಿಕೇರಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಭಾಗವಹಿಸಲು ವಿಜಾಪುರ ಜಿಲ್ಲೆಯಿಂದ ಆಗಮಿಸಿದ ಯುವಕನೊಬ್ಬನ ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿಯನ್ನು ಪೊಲೀಸ್ ಪೇದೆಯೊಬ್ಬರು ಹರಿದು ಹಾಕಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಸಿದ್ಧನಾಥ ಊರಿನ ಯುವಕ ಯಮನಪ್ಪ ಸುಣಗಾರ ಆಗಮಿಸಿದ್ದರು.
ದೈಹಿಕ ಪರೀಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತಿ ಪೊಲೀಸ್ ಪೇದೆಯೊಬ್ಬರೊಂದಿಗೆ ಮಾತಿಗೆ ಮಾತು ಬೆಳೆದು, ಆ ಪೇದೆ ಇವರ ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿಯನ್ನೇ ಹರಿದು ಹಾಕಿದರು ಎನ್ನಲಾಗಿದೆ.
ಈ ಸಂಬಂಧ ಯಮನಪ್ಪ ಸುಣಗಾರ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಘಟನೆ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಡಿವೈಎಪಿ ಜೆ.ಡಿ.ಪ್ರಕಾಶ್ ದೂರನ್ನು ಸ್ವೀಕರಿಸಲಾಗಿದೆ, ಪ್ರಕರಣ ಕುರಿತು ತನಿಖೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ಬೆಳಿಗ್ಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.