ADVERTISEMENT

ವಿದಾಯದ ಹಾದಿಯಲ್ಲಿ ಮಾವು!

ಡಿ.ಬಿ, ನಾಗರಾಜ
Published 12 ಜೂನ್ 2017, 9:32 IST
Last Updated 12 ಜೂನ್ 2017, 9:32 IST
ವಿಜಯಪುರ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಬಳಿ ಭಾನುವಾರ ನಡೆದ ಮಾವಿನ ಹಣ್ಣಿನ ವ್ಯಾಪಾರ
ವಿಜಯಪುರ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಬಳಿ ಭಾನುವಾರ ನಡೆದ ಮಾವಿನ ಹಣ್ಣಿನ ವ್ಯಾಪಾರ   

ವಿಜಯಪುರ: ಹಣ್ಣುಗಳ ರಾಜ ಮಾವಿನ ಸುಗ್ಗಿ ವಿದಾಯದ ಹಾದಿ ಯಲ್ಲಿದೆ. 15ರಿಂದ 20 ದಿನ ಮಾರುಕಟ್ಟೆಯಲ್ಲಿ ಹಣ್ಣು ಸಿಕ್ಕಿದರೆ ಹೆಚ್ಚು. ಮಾವಿನ ಸುಗ್ಗಿಯ ಅಂತ್ಯದಲ್ಲಿ ದರವೂ ಕೊಂಚ ಕಡಿಮೆಯಾಗಿದೆ. ಇದು ಕೊಳ್ಳುವವರ ಖರೀದಿ ಬಯಕೆ ಹೆಚ್ಚಿಸುವ ಜತೆಗೆ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ.

ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಆಸುಪಾಸಿನ ರಸ್ತೆಗಳಲ್ಲಿ ಮಾವು ಮಾರಾಟವಾಗುತ್ತಿದೆ. ಗುಣ ಮಟ್ಟದ ಜವಾರಿ ಹಣ್ಣುಗಳು ಮಾರು ಕಟ್ಟೆ ಪ್ರವೇಶಿಸುವುದು ಇದೇ ವೇಳೆ. ಸುಗ್ಗಿಯ ಆರಂಭದ ದಿನಗಳಲ್ಲಿ ಸಿರಿವಂತರಿಗೆ ಮಾತ್ರ ಕೈಗೆಟಕುವ ಮಾವು, ಇದೀಗ ಎಲ್ಲರಿಗೂ ಸುಲಭ ವಾಗಿ ಲಭ್ಯ. ₹ 100 ಖರ್ಚು ಮಾಡಿ ದರೆ ಒಂದು ಡಜನ್‌ ಹಣ್ಣು ದೊರಕುತ್ತವೆ.

‘ಬಾದಾಮಿ ಡಜನ್‌ಗೆ ₹ 200ರಂತೆ ಬಿಕರಿಯಾದರೆ, ನೀಲಂ, ಲಾಲಬಾಗ್‌, ಜವಾರಿ ₹ 100, ಮಲ್ಲಿಕಾ ₹ 150 ರಿಂದ 200, ಆಫೂಸ್‌ ₹ 300ಕ್ಕೆ ಒಂದು ಡಜನ್‌ನಂತೆ ಮಾರಾಟವಾಗುತ್ತಿವೆ.

ADVERTISEMENT

ಸುಗ್ಗಿಯ ಆರಂಭದಿಂದ ಅಂತ್ಯ ದವರೆಗೂ ಆಫೂಸ್‌ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅಸಂಖ್ಯಾತ ಗ್ರಾಹಕರು ಬೇಡುವುದು ಆಫೂಸ್ ಮಾವನ್ನೇ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಹಣ್ಣುಗಳನ್ನು ಮಾವಿನ ಸುಗ್ಗಿಯುದ್ದಕ್ಕೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಹಾರಾಷ್ಟ್ರದ ವಿವಿಧ ಭಾಗ ಗಳಿಂದ ತರಿಸಿಕೊಂಡು, ಮಾರಾಟ ನಡೆಸುತ್ತೇವೆ’ ಎಂದು ವ್ಯಾಪಾರಿಗಳಾದ ಮೊಹಮ್ಮದ್‌ ರಫೀಕ್‌ ಜಮಖಂಡಿ, ಬಾಲಚಂದ್ರ ಭಜಂತ್ರಿ ತಿಳಿಸಿದರು.

‘ಆರಂಭದಲ್ಲಿ ಚಲೋ ವ್ಯಾಪಾರ ನಡೆಯಿತು. ದರ ಹೆಚ್ಚಿದ್ದರೂ ಅನು ಕೂಲಸ್ಥರು ಖರೀದಿಸಿದರು. ಕಾರ ಹುಣ್ಣಿಮೆ ಬಳಿಕ 75% ವಹಿವಾಟು ಇಳಿಮುಖಗೊಂಡಿದೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಗಿ ಬೀಳುತ್ತಿರುವುದು ಮಧ್ಯಮ ವರ್ಗದವರು, ಬಡವರು.

ಒಟ್ಟಾರೆ ಹಿಂದಿನ ವರ್ಷದ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಅತ್ಯಂತ ಕಡಿಮೆ ವಹಿವಾಟು ನಡೆದಿದೆ. ಜನರ ಬಳಿ ಹಣವಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಮಳೆ ಆರಂಭಗೊಂಡಿತು ಎಂದೊಡನೆ ಸಹಜವಾಗಿಯೇ ನಮ್ಮ ವಹಿವಾಟು ಇಳಿಮುಖಗೊಳ್ಳುತ್ತದೆ. ರೈತ ಸಮೂಹ ಬಜಾರ್‌ಗೆ ಖರೀದಿಗೆ ಬರುವ ಬದಲು ಹೊಲಗಳಲ್ಲಿ ದುಡಿಮೆಯಲ್ಲಿ ತೊಡಗಿ ಸಿಕೊಳ್ಳುತ್ತದೆ. ಕಾರಹುಣ್ಣಿಮೆ ಬಳಿಕ ವಹಿವಾಟು ಬಹುತೇಕ ಸ್ಥಗಿತ ಗೊಂಡಂತೆ’ ಎಂದು ಅವರು ಹೇಳಿದರು.

ಕೊನೆಯ ರುಚಿ: ‘ಮಾವು ಮಾರುಕಟ್ಟೆ ಯಿಂದ ವಿದಾಯ ಹೇಳಲು ಸಜ್ಜಾಗಿದೆ. ಇನ್ನೊಂದು 15 ದಿನ ಸಿಕ್ಕರೆ ಹೆಚ್ಚು. ಮತ್ತೆ ನಾವು ಮಾವಿನ ಸ್ವಾದ ಸವಿಯಬೇಕು ಎಂದರೇ ಕನಿಷ್ಠ 9–10 ತಿಂಗಳು ಕಾಯಬೇಕು. ಆದ್ದರಿಂದ ಸುಗ್ಗಿಯ ಕೊನೆ ಅವಧಿಯಲ್ಲಿ ಹೆಚ್ಚಿನ ಮಾವು ಖರೀದಿ ನಡೆಸುತ್ತಿದ್ದೇವೆ’ ಎಂದು ಗ್ರಾಹಕ ಅರ್ಜುನ ಲಮಾಣಿ ತಿಳಿಸಿದರು.

* * 

ಭಾನುವಾರ ರಜೆ ದಿನ. ಮನೆಯಲ್ಲಿ ಮಾವುಮಯ. ರುಚಿಕರ ಸ್ವಾದ ಸವಿದು ಮನೆ ಮಂದಿಯೆಲ್ಲ ಸಂಭ್ರಮಿಸಲು ಹೆಚ್ಚು ಹಣ್ಣು ಕೊಂಡೊಯ್ದೆ
ಶಂಕರ ಕಲಬುರ್ಗಿ
ಬ್ಯಾಂಕ್‌ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.