ADVERTISEMENT

ವಿದ್ಯುತ್ ತಂತಿ ಬಿದ್ದು ಹಾನಿ, ವ್ಯಕ್ತಿ ಸಾವು

ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎ.ಎಸ್.ಪಾಟೀಲ; ಪರಿಹಾರ ನೀಡಲು ತಾಕೀತು

​ಪ್ರಜಾವಾಣಿ ವಾರ್ತೆ
Published 28 ಮೇ 2018, 9:07 IST
Last Updated 28 ಮೇ 2018, 9:07 IST
ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಗದ್ದೆಪ್ಪ ಬಂಡಿವಡ್ಡರ.
ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಗದ್ದೆಪ್ಪ ಬಂಡಿವಡ್ಡರ.   

ನಾಲತವಾಡ: ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ವಿದ್ಯುತ್ ಪ್ರವಾಹಕ ತಂತಿಯೊಂದು ಹೋಟೆಲ್‌ ಚಾವಣ ಮೇಲೆ ಬಿದ್ದಿದ್ದರಿಂದ, ವಿದ್ಯುತ್‌ ಹರಿದು ಹಾನಿಯಾಗಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಪಟ್ಟಣದ ಜಗದೇವ ನಗರದ ತಾಳಿಕೋಟೆ ರಸ್ತೆಯಲ್ಲಿ ಕಂಬದಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳು ವೀರಭದ್ರಪ್ಪ ಹೆಬ್ಬಾಳ ಎಂಬುವರ ಹೋಟೆಲ್ ಮೇಲೆ ಬಿದ್ದಿವೆ. ಈ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಮಾಲೀಕ ಹಾಗೂ ಅವರ ಪತ್ನಿ, ಪುತ್ರ ಸೇರಿ ಏಳು ಜನರಿಗೂ ವಿದ್ಯುತ್ ಹರಿದಿದೆ. ವಿದ್ಯುತ್ ಅವಘಡದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ವೇಳೆ 9 ವರ್ಷದ ಮಗು ಹಾಗೂ ಚಹ ಸೇವನೆಗೆ ಬಂದಿದ್ದ ಇತರೇ 4 ಜನರಿಗೂ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿದ್ದಾರೆ.

ಗಾಯಗೊಂಡ ಗದ್ದೆಪ್ಪ ಬಂಡಿವಡ್ಡರ(52) ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ಅಸುನಿಗಿದಿದ್ದಾರೆ. ಶಿವಪ್ಪ ದಿಂಡವಾರ ಸೇರಿದಂತೆ ಐವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಗೊಂಡ ಗಂಗಪ್ಪ ಚಲವಾದಿ, ಶಂಕ್ರಪ್ಪ ಹೆಬ್ಬಾಳ, ದುರಗಪ್ಪ ವಡ್ಡರ, ಪದ್ಮಾವತಿ ಅವ
ರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಭಾರಿ ಆಕ್ರೋಶ: ‘ತಂತಿಗಳನ್ನು ಮೇಲೆತ್ತದೆ ಹಾಗೇ ಬಿಟ್ಟಿರಿಂದ, ಗಾಳಿಗೆ ತಂತಿಗಳು ಹರಿದು ಬಿದ್ದಿವೆ. ತಂತಿಗಳನ್ನು ಸೂಕ್ತವಾಗಿ ಕಟ್ಟಬೇಕು ಎಂದು ನಾಗರಿಕರು ಮನವಿ ಮಾಡಿದ್ದರೂ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಕ್ರಮ ಕೈಗೊಳ್ಳಲಿಲ್ಲ. ಆದ್ದರಿಂದ ಈ ಘಟನೆಗೆ ಕಾರಣ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮಾನವೀಯತೆ ಮೆರೆದ ವ್ಯಕ್ತಿ: ವಿದ್ಯುತ್ ಸ್ಪರ್ಶದಿಂದ ನರಳಾಡುತ್ತಿದ್ದುದನ್ನು ಕಂಡ ಡಿಎಸ್ಎಸ್ ಮುಖಂಡ ಉಮೇಶ ಆಲಕೊಪ್ಪರ ತಕ್ಷಣವೇ ಹೆಸ್ಕಾಂ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು ಎಂದು ಸ್ಥಳೀಯರು ಹೇಳಿದರು.

ತರಾಟೆ: ಹೋಟೆಲ್‌ ಮೇಲೆ ವಿದ್ಯುತ್‌ ತಂತಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ್ ನಿವಾಸದಲ್ಲಿ ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ‘ಈ ನಿಮ್ಮ ಬೇಜವಾಬ್ದಾರಿಯಿಂದ ಪಟ್ಟಣವೂ ಸೇರಿದಂತೆ ತಾಳಿಕೋಟ, ಮುದ್ದೇಬಿಹಾಳ ಪಟ್ಟಣದಲ್ಲೂ ಜೀವ ಬಲಿ ಪಡೆಯುವ ತಂತಿಗಳು ಜೋತು ಬಿದ್ದಿವೆ. ಈವರೆಗೂ ಅವುಗಳನ್ನು ಮೇಲೆತ್ತುವ ಕಾರ್ಯ ಮಾಡಿಲ್ಲ. ಅವಘಡ ಸಂಭವಿಸಿದಾಗಲೇ ನಿಮಗೆ ಎಲ್ಲ ನೆನಪಾಗುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೃತ ವ್ಯಕ್ತಿ ಗದ್ದೆಪ್ಪ ಬಂಡಿವಡ್ಡರ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವೆಚ್ಚ ನೋಡಿಕೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ಹೆಸ್ಕಾಂ ಅಧಿಕಾರಿಗಳಾದ ಜಿ.ಶರಣಪ್ಪ, ಜಗದೀಶ ಜಾಧವ್, ಆರ್.ಎಚ್.ಹಾದಿಮನಿ, ಎಸ್.ಐ.ಹಾವರಗಿ, ಡಿ.ಎಸ್.ಸಿರಜಿಣಗಿ, ಮುನಿರಾಜ ಅವರಿಗೆ ತಾಕೀತು ಮಾಡಿದರು.

‘ಕಳೆದ ಹಲವು ವರ್ಷಗಳಿಂದ ಹೆಸ್ಕಾಂ ಸ್ಥಳೀಯ ಕಚೇರಿಯಲ್ಲಿ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿದೆ’ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ‘24 ಗಂಟೆಯಲ್ಲಿ ಕಚೇರಿಯ ದೂರವಾಣಿ ಚಾಲನೆಯಲ್ಲಿಡಬೇಕು. ಘಟನೆಗೆ ಸಂಬಂಧಿಸಿದಂತೆ ಶಾಖಾಧಿಕಾರಿ ಹಾಗೂ ತಂತಿ ಜೋಡಣೆ ಗುತ್ತಿಗೆ ಪಡೆದ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಶಾಸಕರು ಸೂಚಿಸಿದರು.

ಬಿಜೆಪಿ ಮುಖಂಡರಾದ ಎಂ.ಎಸ್.ಪಾಟೀಲ, ಎಪಿಎಂಸಿ ನಿರ್ದೇಶಕ ಪ್ರಭು ಡೇರೆದ, ಪವಾಡಬಸ್ಸು ದೇಶಮುಖ, ಮಾರುತಿ ಗುರಿಕಾರ, ಜಿ.ಮಹಾಂತೇಶ, ಬಾಬು ಅಮಾತಿಗೌಡ, ಗುರುರಾಜ ಅಂಗಡಿ, ಸಂಗು ಸಾಲಿಮಠ, ಸಂಜೀವ ಜೋಶಿ, ಗುರುನಾಥ ಡಿಗ್ಗಿ, ಖಾಜಾಹುಸೇನ್ ಎತ್ತಿನಮನಿ, ಬಸಣ್ಣ ವಡಗೇರಿ, ಗೌಡಪ್ಪ ಹಂಪನಗೌಡ, ಲೊಟಗೇರಿಯ ಗುರುಮೂರ್ತಿ ಕಣಕಾಲಮಠ ಇದ್ದರು.

ಘಟನೆಯ ಸ್ಥಳಕ್ಕೆ ಡಿವೈಎಸ್ಪಿ ಮಹೇಶ್ವರಗೌಡ ಭೇಟಿ ನೀಡಿದ್ದರು. ಘಟನೆ ಕುರಿತು ಹಂತ ಹಂತವಾಗಿ ಮಾಹಿತಿ ಪಡೆಯುವುದಾಗಿ ತಿಳಿಸಿದ ಅವರು, ಹೋಟೆಲ್‌ ಮಾಲೀಕನಿಂದ ಹೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.