ADVERTISEMENT

ವೇದಾಂತ ಕೇಸರಿಯ ‘ಹಸಿರು ಪ್ರೀತಿ’

ಡಿ.ಬಿ, ನಾಗರಾಜ
Published 5 ಜೂನ್ 2017, 7:42 IST
Last Updated 5 ಜೂನ್ 2017, 7:42 IST
ಜ್ಞಾನಯೋಗಾಶ್ರಮದ ಆವರಣದಲ್ಲಿನ ಹಸಿರು ವಾತಾವರಣ
ಜ್ಞಾನಯೋಗಾಶ್ರಮದ ಆವರಣದಲ್ಲಿನ ಹಸಿರು ವಾತಾವರಣ   

ವಿಜಯಪುರ: ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮೂಸೆಯಲ್ಲಿ ಅರಳಿದ ಕಲ್ಪನೆ. ದೂರದೃಷ್ಟಿ ಚಿಂತನೆಯ ಫಲವೇ ನಗರದ ಜ್ಞಾನಯೋಗಾಶ್ರಮ.
ಬಿಸಿಲ ನಾಡಲ್ಲಿ ಇಲ್ಲಿನ ವಾತಾವರಣ ಮಲೆನಾಡು, ಕರಾವಳಿಯನ್ನು ನೆನಪಿಸುವಂತಿದೆ. 18 ಎಕರೆ ವಿಸ್ತಾರದಲ್ಲೂ 35–40ರ ಪ್ರಾಯದ ಮರಗಳು ಬೆಳೆದು ನಿಂತಿದ್ದು, ಕಡು ಬೇಸಿಗೆಯಲ್ಲೂ ತಂಪಿನ ವಾತಾವರಣವಿರುತ್ತದೆ.

70–80ರ ದಶಕದಲ್ಲಿ ಆಶ್ರಮ ಸ್ಥಾಪಿಸುವ ಸಂದರ್ಭ ವೇದಾಂತ ಕೇಸರಿಯ ಮೂಸೆಯಲ್ಲಿ ಅರಳಿದ ಕಲ್ಪನೆಯೇ ಈ ಗಿಡ–ಮರದ ಪರಿಸರ. ವಿಶಾಲ ಜಾಗದಲ್ಲಿ ಕಟ್ಟಡ ನಿರ್ಮಿಸುವ ಬದಲು ಆಲ, ಬೇವು, ಹುಣಸೆ, ಸಂಕೇಶ್ವರ ಸೇರಿದಂತೆ ವಿಭಿನ್ನ ಜಾತಿಯ ಸಸಿಗಳನ್ನು ಭಕ್ತರ ನೆರವಿನಿಂದ ನೆಟ್ಟು, ಆಶ್ರಮದ ಮೂಲೆಯೊಂದರಲ್ಲಿ ತೆರೆದ ಬಾವಿ ತೋಡಿ, ನೀರು ಹಾಕಿ ಪೋಷಿಸಿ, ಹಸಿರು ಬೆಳೆಸಿದ ಮಹಾಮಹಿಮನ ಫಲವಿದು.

ನಗರದಲ್ಲಿ ಎಲ್ಲಿಯಾದರೂ ದಟ್ಟೈಸಿದ ಮರಗಳು, ಹಸಿರ ವಾತಾವರಣವಿದೆ ಎಂದರೇ ಜ್ಞಾನಯೋಗಾಶ್ರಮದಲ್ಲಿ ಮಾತ್ರ. ಇಲ್ಲಿ ಮಲೆನಾಡಿನ ಅನುಭವವಾಗುತ್ತದೆ. ಈ ವಾತಾವರಣ ಬೇರೆ ಎಲ್ಲೂ ನಮಗೆ ಸಿಗುವುದಿಲ್ಲ ಎನ್ನುತ್ತಾರೆ ಸಾಹಿತಿ ಸುಭಾಸ ಯಾದವಾಡ.

ADVERTISEMENT

ಆದಿಲ್‌ಶಾಹಿ ಅರಸರ ಜಗದ್ವಿಖ್ಯಾತ ಸ್ಮಾರಕಗಳ ಬಳಿ ಉದ್ಯಾನ ನಿರ್ಮಿಸಿದ್ದರೂ ಇಲ್ಲಿನ ಪ್ರಶಾಂತತೆ, ಪ್ರಸನ್ನತೆ ಸಿಗುವುದಿಲ್ಲ. ಕಡು ಬೇಸಿಗೆಯಲ್ಲಿ ಇಲ್ಲಿನ ವಾತಾವರಣ ತಂಪು ತಂಪು. ಆಶ್ರಮದ ಹೆಸರಿಗೆ ಅರ್ಥಪೂರ್ಣವಾಗಿ ಇಲ್ಲಿನ ಪರಿಸರವಿದೆ ಎನ್ನುತ್ತಾರೆ ಅವರು.

‘ಮುಂಜಾನೆ–ಮುಸ್ಸಂಜೆ ಹಕ್ಕಿಗಳ ಕಲರವ. ನೆತ್ತಿ ಸುಡುವ ಕೆಂಡದಂಥ ಬಿಸಿಲಿದ್ದರೂ ಇಲ್ಲಿ ತಂಪು ತಂಪು. ಮನಸ್ಸಿಗೆ ಮುದ ನೀಡುವ ಪ್ರಶಾಂತ ವಾತಾವರಣ. ಮೈಮನ ಮುದಗೊಳ್ಳುವ ರಮ್ಯ ತಾಣವಿದು. ವಾಯು ವಿಹಾರಿಗಳ ಪಾಲಿನ ಸ್ವರ್ಗ. ಹಿರಿಯರು– ಕಿರಿಯರು, ಪುರುಷ–ಮಹಿಳೆ ಎನ್ನದೆ ನಿರ್ಭೀತಿಯಿಂದ ತಿರುಗಾಡುವ ಜಾಗವಿದು. ಇದರ ಜತೆಗೆ ಅಧ್ಯಾತ್ಮದ ಸ್ಪರ್ಶ. ದೇವರ ಆರಾಧನೆ.

ಧ್ಯಾನ, ಜಪ–ತಪ, ಪ್ರವಚನಕ್ಕೆ ಸೂಕ್ತ ಸ್ಥಳವಿದು. ವಿದ್ಯಾರ್ಥಿಗಳ ಪಾಲಿನ ಏಕಾಗ್ರತೆಯ ತಾಣ. ಜಗತ್ತಿನ ಎಲ್ಲ ಜಂಜಡಗಳಿಂದ ನೆಮ್ಮದಿ ಒದಗಿಸುವ ಸ್ವರ್ಗವಿದು...
ಇದು ಮಲೆನಾಡು, ಕರಾವಳಿಯ ಸುಂದರ ಕಡಲ ಕಿನಾರೆಯಲ್ಲಿನ ಪ್ರವಾಸಿ ತಾಣವಲ್ಲ. ಬರದ ಬೆಂಗಾಡು ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ನಗರದಲ್ಲಿನ ಅಧ್ಯಾತ್ಮದ ಕೇಂದ್ರವಿದು.

ಇಲ್ಲಿ ಅಧ್ಯಾತ್ಮ, ಆಧ್ಯಾತ್ಮಿಕ, ಪ್ರವಚನ, ಪರಂಪರೆಯ ಪಾಲನೆ ಜತೆಗೆ ಪ್ರಕೃತಿಯ ಆರಾಧನೆಯೂ ನಡೆದಿದೆ. ಇದರ ಫಲವಾಗಿಯೇ 18 ಎಕರೆ ವಿಸ್ತಾರದ ಜಾಗದಲ್ಲಿ ಇದೀಗ ಹಸಿರು ವನ ನಿರ್ಮಾಣಗೊಂಡಿದೆ...’ ಜ್ಞಾನಯೋಗಾಶ್ರಮದಲ್ಲಿನ ಪರಿಸರದ ಕುರಿತು ನಿರಂತರವಾಗಿ ಇಲ್ಲಿಗೆ ಭೇಟಿ ನೀಡುವ ಬಹುತೇಕರ ಅನಿಸಿಕೆಗಳ ಒಟ್ಟಾಭಿಪ್ರಾಯದ ಸಾರವಿದು.

‘ಆಶ್ರಮದ ಪರಿಸರದಲ್ಲಿ ಕುಳಿತು ಹಕ್ಕಿಗಳ ಚಿಲಿಪಿಲಿ ಕಲರವ ಕೇಳುವುದೇ ಒಂದು ಆನಂದ. ಪ್ರಶಾಂತ ವಾತಾವರಣದಲ್ಲಿ ಮನಸ್ಸು ಪ್ರಸನ್ನತೆ ಅನುಭವ ಪಡೆಯುತ್ತದೆ. ಅಕ್ಷರಶಃ ಮಲೆನಾಡಿನ ಪರಿಸರವನ್ನು ಬಿಸಿಲ ನಾಡಿನ ಜನತೆಗೆ ಜ್ಞಾನಯೋಗಾಶ್ರಮ ಒದಗಿಸಿದೆ’ ಎನ್ನುತ್ತಾರೆ ಗೃಹಿಣಿ ತಾರಾ ಪಾಟೀಲ.

‘16 ವರ್ಷಗಳಿಂದ ಇಲ್ಲಿಯೇ ಇರುವೆ. ಆರೋಗ್ಯಕರ ವಾತಾವರಣವಿದೆ. ಹಕ್ಕಿಗಳ ಕಲರವ, ಹಸಿರು ಮನದುಂಬಿದೆ. ಮಾನಸಿಕ ನೆಮ್ಮದಿ ಸಿಕ್ಕಿದೆ. ನಿತ್ಯವೂ ಅಪಾರ ಜನಸ್ತೋಮ ಇಲ್ಲಿಗೆ ಭೇಟಿ ನೀಡುತ್ತದೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಜನೆಗೆಂದು ಬರುತ್ತಾರೆ.

ನೂರೆಂಟು ಒತ್ತಡ ಹೊತ್ತು ಬರುವವರು ಇಲ್ಲಿ ಒಂದರ್ಧ ತಾಸು ಕಳೆದು ನಿರಾತಂಕರಾಗಿ ಮರಳುತ್ತಾರೆ. ಇಲ್ಲಿನ ಪರಿಸರ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ’ ಎಂದು ಅಶೋಕ ತಿಳಿಸಿದರು.

* * 

ಜ್ಞಾನಯೋಗಾಶ್ರಮ ಪ್ರವೇಶಿಸುತ್ತಿದ್ದಂತೆ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ.ಇಲ್ಲಿನ ಹಸಿರನ್ನು ಕಣ್ತುಂಬಿಕೊಂಡರೆ ಜಂಜಾಟಗಳೆಲ್ಲಾ ದೂರವಾಗುತ್ತವೆ
ಸುಭಾಸ ಯಾದವಾಡ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.