ADVERTISEMENT

ವೈದ್ಯದೇವೋಭವ... ಗುಣಗಾನ ಮಾಡಿದ ರೋಗಿಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 5:00 IST
Last Updated 14 ಅಕ್ಟೋಬರ್ 2012, 5:00 IST

ಸಿಂದಗಿ: `ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಸಾವಿನ ಸಂಕಟ ಪಡುತ್ತಿದೆ. ನನ್ನ ಬಾಳಸಂಗಾತಿ ಪತಿ ಕೂಡ ಎಳ್ಳಷ್ಟೂ ಕಾಳಜಿ ವಹಿಸಿರಲಿಲ್ಲ. ನನ್ನ ಬದುಕೇ ಇಲ್ಲಿಗೆ ಮುಗಿಯಿ ತೇನೋ ಎಂಬ ಸಾವಿನ ಭಯವೂ ಕಾಡುತ್ತಿತ್ತು. ಆದರೆ ಇದಕ್ಕೆ ಒಂದು ಆಶಾಕಿರಣ ಎಂಬಂತೆ ಡಾ.ಆರ್.ಬಿ.ಚೌಧರಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಸಿಂದಗಿಯಲ್ಲಿ ಹಮ್ಮಿಕೊಂ ಡಿದ್ದ ಉಚಿತ ಆರೋಗ್ಯ ಶಿಬಿರ ಕಾಣಿಸಿಕೊಂಡಿತು. ಇಲ್ಲಿ ನನ್ನ ರೋಗವನ್ನು ಪತ್ತೆ ಮಾಡಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದರು.      

 ಜೊತೆಗೆ ಕಡು ಬಡವಿಯಾದ ನನಗೆ ಬೆಂಗಳೂರು ದಿ ಪಲ್ಸ್ ಮಲ್ಪಿ ಹಾಸ್ಪಿಟಲ್‌ಗೆ ಕರೆದೊಯ್ದು ಒಂದು ಪೈಸೆಯೂ ಖರ್ಚಿಲ್ಲದೇ ಗರ್ಭಾಶಯದ ಶಸ್ತ್ರ ಚಿಕಿತ್ಸೆ ಮಾಡಿಸಿ ಔಷಧೋಚಾರ ನೀಡಿ ಮರಳಿ ಮನೆಗೆ ತಲುಪಿಸಿದರು. ಇಂಥ ಮಾನವೀಯ ಕಾರ್ಯ ಮಾಡಿದವರು ಇದೇ ಭಾಗದವರಾದ ಬೆಂಗಳೂರು  ಪಲ್ಸ್ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ನಿರ್ದೇಶಕ ಡಾ.ಗೌತಮ ಚೌಧರಿ~ ಎಂದು ಕಣ್ಣೀರು ಸುರಿಸುತ್ತ  `ವೈದ್ಯ ದೇವೋ ಭವ~ ಎಂದು ಗುಣಗಾನ ಮಾಡಿದವರು ನಾಗಾಂವಿ ತಾಂಡಾ ನಿವಾಸಿ ಕಮಲಾಬಾಯಿ ಲಮಾಣಿ.

ಶುಕ್ರವಾರ ಸಿಂದಗಿಯಲ್ಲಿ ಡಾ.ಆರ್.ಬಿ.ಚೌಧರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ  ಸಮಾರಂಭದಲ್ಲಿ  ಅವರು ಹೀಗೆ ಹೃದಯ ತುಂಬಿ ಮಾತನಾಡಿದರು.

ಅದರಂತೆ ಹೃದಯ ರೋಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವಿಜಯಕುಮಾರ ಜೈನ್, ಕಿವಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕನ್ನೊಳ್ಳಿ ಗ್ರಾಮದ ಬಾಲಕಿ ಭುವನೇಶ್ವರಿ ವಾಗೀಶ ಸ್ಥಾವರಮಠ ಗೌತಮ ಅವರಿಗೆ ಧನ್ಯತಾ ಭಾವದಿಂದ ಕೃತಜ್ಞತೆ ಸಲ್ಲಿಸಿದರು. ಮಲ್ಲಾ ಗ್ರಾಮದ ದತ್ತು ಶಿವಾಜಿ ಚವ್ಹಾಣ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಅವರ ಚಿಕಿತ್ಸೆ ಕಾರ್ಯವೂ ನಡೆದಿದೆ ಎಂದು ಟ್ರಸ್ಟ್‌ನ ಮಲ್ಲು ಗತ್ತರಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಲಯನ್ಸ್ ಕ್ಲಬ್ ಖಜಾಂಚಿ ನೆಹರೂ ಪೋರವಾಲ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಮಾತನಾಡಿ, ಮಾನವೀಯ ಸೇವಾ ಕಾರ್ಯಕ್ಕೆ ಇನ್ನೊಂದು ಹೆಸರೇ ಡಾ.ಗೌತಮ ಚೌಧರಿ. `ಜನ ಸೇವೆಯೇ ಜನಾರ್ದನ ಸೇವೆ~ ಎಂಬ ಮಂತ್ರ ಪಠಿಸುವ ಗೌತಮ ಅವರ ಸೇವಾ ಕಾರ್ಯ ಇನ್ನೂ ಮುಂದುರೆಯುವ ಮೂಲಕ ಬಡವರಿಗೆ ಆಸರೆಯಾಗಲಿ ಎಂದು ಹಾರೈಸಿದರು.

ಡಾ.ಗೌತಮ ಚೌಧರಿ ಮಾತನಾಡಿ, ಸಾಮಾಜಿಕ ಸೇವೆಗೆ ತಾವೂ ಸದಾ ಸಿದ್ದ. ಬಡವರು, ನಿರ್ಗತಿಕರ ಸೇವೆಯಲ್ಲಿ ದೇವರನ್ನು ಕಾಣುವ ಮನೋಭಾವ ನನ್ನದಾಗಿದೆ. ಎಂಥ ಪ್ರಮುಖ ರೋಗಗಳಿಂದ ಬಳಲುವ ಬಡ ಜನರು ತಮ್ಮಿಂದ ಉಚಿತ ಸೇವೆ ಪಡೆಯಬಹುದಾಗಿದೆ ಎಂದು ಹೇಳಿದರು.

ವಿಶ್ರಾಂತ ಪ್ರಾಚಾರ್ಯ ಬಿ.ಎಂ.ಬಿರಾದಾರ, ತಾಪಂ ಸದಸ್ಯ ರಾಜೇಂದ್ರ ತಳವಾರ, ಯೋಗಪ್ಪಗೌಡ ಪಾಟೀಲ, ಗೊಲ್ಲಾಳಪ್ಪ ನಾಯ್ಕೋಡಿ ಗೋಲಗೇರಿ, ಮಹಾದೇವ ಲೋಣಿ, ಸಿದ್ರಾಮಪ್ಪ ದುದ್ದಣಗಿ, ಕೆ.ಎಚ್. ಸೋಮಾಪುರ ಉಪಸ್ಥಿತರಿದ್ದರು.  ಮಲ್ಲು ಘತ್ತರಗಿ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.