ADVERTISEMENT

ವೈಯಕ್ತಿಕ ಸಂಘರ್ಷ ನಡೆಸಿದ್ದೀವಿ; ವಿಶ್ವಾಸಕ್ಕೆ ತಗೊಳ್ರಿ: ಪಟ್ಟಣಶೆಟ್ಟಿ

ಯತ್ನಾಳ ಪಕ್ಷ ಸೇರ್ಪಡೆ ವಿಷಯ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು; ಅಪ್ಪಾಸಾಹೇಬ ಪಟ್ಟಣಶೆಟ್ಟಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 5:15 IST
Last Updated 29 ಮಾರ್ಚ್ 2018, 5:15 IST

ವಿಜಯಪುರ: ‘ಪಕ್ಷದ ಮುಖಂಡರು, ಸಂಘ ಪರಿವಾರದ ಪ್ರಮುಖರನ್ನು ಬಸನಗೌಡ ಪಾಟೀಲ ಯತ್ನಾಳ ವಾಚಾಮಗೋಚರ ನಿಂದಿಸಿದ ಸಂದರ್ಭ, ವರಿಷ್ಠರ ಸೂಚನೆಯಂತೆ ಸ್ಥಳೀಯವಾಗಿ ಯತ್ನಾಳ ಜತೆ ವೈಯಕ್ತಿಕವಾಗಿ ಸಂಘರ್ಷಕ್ಕಿಳಿದಿದ್ದೀನಿ.

ಯತ್ನಾಳರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು, ಬಿಡುವುದು ವರಿಷ್ಠರ ನಿರ್ಧಾರ. ಆದರೆ ಈ ಕುರಿತಂತೆ ಸೌಜನ್ಯಕ್ಕಾದರೂ ನಮ್ಮ ನಾಯಕರು ಸ್ಥಳೀಯ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬುಧವಾರ ಇಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.

‘28 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವೆ. ಎಂದೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ. ಮುಂದೆಯೂ ನಿಷ್ಠನಾಗಿರುವೆ. ಬೇರೆ ಪಕ್ಷಕ್ಕೆ ಹೋಗೋ ಅವಶ್ಯಕತೆ ನನಗಿಲ್ಲ. ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ಸದೃಢನಾಗಿರುವೆ’ ಎಂದು ಅಪ್ಪು ಪಕ್ಷಾಂತರದ ಊಹಾಪೋಹಗಳಿಗೆ ಪತ್ರಿಕಾಗೋಷ್ಠಿ ಮೂಲಕ ತೆರೆ ಎಳೆಯಲು ಯತ್ನಿಸಿದರು.

ADVERTISEMENT

‘ಬಿಜೆಪಿಗೆ ಸೇರ್ಪಡೆಯಾಗಿ ಎಂದು ಯತ್ನಾಳರ ಮನೆ ಬಾಗಿಲಿಗೆ ಯಾವೊಬ್ಬ ಬಿಜೆಪಿ ಮುಖಂಡರು ತೆರಳಿಲ್ಲ. ಅವರೇ ನಮ್ಮ ಮುಖಂಡರ ಮನೆ ಬಾಗಿಲು ತಟ್ಟಿದ್ದಾರೆ. ಬಿಜೆಪಿ ಕಚೇರಿಗೆ ಎಡತಾಕಿದ್ದಾರೆ. ವಿಜಯಪುರ ಜಿಲ್ಲೆ ಸೇರಿದಂತೆ ಎಲ್ಲೆಡೆ ಬಿಜೆಪಿ ಸದೃಢವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ನಿರ್ಧಾರದಿಂದ, ಯತ್ನಾಳ ಸೇರ್ಪಡೆಗೆ ವರಿಷ್ಠರು ಮುಂದಾಗಿದ್ದಾರೆ’ ಎಂದು ಪಟ್ಟಣಶೆಟ್ಟಿ ವರಿಷ್ಠರ ನಿರ್ಧಾರವನ್ನು ಇದೇ ಸಂದರ್ಭ ಸಮರ್ಥಿಸಿಕೊಂಡರು.

‘ಯತ್ನಾಳ ಸೇರ್ಪಡೆ ನನಗೆ ಅಂಜಿಕೆಯಲ್ಲ. ನಮ್ಮ ಸಂಘಟನೆ ಭದ್ರವಾಗಿದೆ. ಇನ್ನಷ್ಟು ಬಲಪಡಿಸಲು ವರಿಷ್ಠರು ವಿವಿಧ ಕ್ಷೇತ್ರಗಳ ಶಾಸಕರನ್ನು ಸೆಳೆಯಲಿದ್ದಾರೆ ಎಂಬ ಮಾಹಿತಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಚರ್ಚೆಯಾಗುತ್ತಿದೆ.

ಇವರ ಸೇರ್ಪಡೆಗೂ ಮುನ್ನ ಸ್ಥಳೀಯ ಮಂಡಲಗಳು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಕೇಳುವುದು ಒಳ್ಳೆಯದು. ನಾವೂ ಸಾಧ್ಯಾಸಾಧ್ಯತೆ ವಿವರಿಸುತ್ತೇವೆ. ಬಬಲೇಶ್ವರದಲ್ಲೂ ‘ಆಪರೇಷನ್‌ ಕಮಲ’ ನಡೆದರೂ ಅಚ್ಚರಿ ಪಡಬೇಕಿಲ್ಲ ಎಂಬಂತಹ ವಾತಾವರಣ ನಿರ್ಮಾಣಗೊಂಡಿದೆ. ಆಪರೇಷನ್‌ಗೂ ಮುಂಚೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂಬುದಷ್ಟೇ ನಮ್ಮ ಆಗ್ರಹ’ ಎಂದು ವರಿಷ್ಠರಿಗೆ ಮನವಿ ಮಾಡಿದರು.

‘ಪಕ್ಷದ ಬಲವರ್ಧನೆಗೆ ಯಾರದ್ದೂ ತಕರಾರಿಲ್ಲ. ಆದರೆ ಜಿಲ್ಲೆಯಲ್ಲಿ ನಡೆ ಯುವ ವಿದ್ಯಮಾನವನ್ನು ಮಾಧ್ಯಮ ಗಳ ಮೂಲಕ ತಿಳಿಯಬೇಕಾಗಿದೆ. ಇದಕ್ಕೂ ಮುನ್ನವೇ ಸ್ಥಳೀಯವಾಗಿರುವ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ’ ಎಂದು ಅಪ್ಪು ವರಿಷ್ಠರನ್ನು ಆಗ್ರಹಿಸಿದರು.

‘ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಏಕಾಏಕಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವಿಷಯ ಸ್ಥಳೀಯ ಮುಖಂಡರಿಗೆ ಗೊತ್ತಿರಲಿಲ್ಲ. ಈ ಬೆಳವಣಿಗೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಜತೆ ಅಸಮಾಧಾನ ಹುಟ್ಟಿಸುತ್ತದೆ. ಇಂತಹದ್ದಕ್ಕೆ ಆಸ್ಪದ ನೀಡದಂತೆ ಸ್ಥಳೀಯರ ಜತೆಯೂ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮಾಜಿ ಸಚಿವರು ಪಕ್ಷದ ಮುಖಂಡರಿಗೆ ಒತ್ತಾಯಿಸಿದರು.

**

ಯತ್ನಾಳ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿಯೇ ನನ್ನ ನಿರ್ಧಾರ ತಿಳಿಸುತ್ತೇನೆ. ಬಿಜೆಪಿಯಲ್ಲೇ ಮುಂದುವರಿಯುವೆ.

-ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.