ADVERTISEMENT

ವ್ಯಾಪಕ ಮಳೆ: ಡೋಣಿ ನದಿಗೆ ಪ್ರವಾಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:19 IST
Last Updated 4 ಸೆಪ್ಟೆಂಬರ್ 2013, 6:19 IST

ತಾಳಿಕೊಟೆ: ಪಟ್ಟಣ ಹಾಗೂ ಸುತ್ತ ಮುತ್ತ ಕಳೆದೆರಡು ದಿನಗಳಿಂದ ಸುರಿ ಯುತ್ತಿರುವ ಉತ್ತಮ ಮಳೆಯಿಂದಾಗಿ ಡೋಣಿ ನದಿಗೆ ಪ್ರವಾಹ ಬಂದಿದೆ. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಬಳಿಯ ಜಮೀನುಗಳಲ್ಲಿ, ಗುತ್ತಿಹಾಳ, ಬೋಳವಾಡ ಮೊದಲಾದ ನದಿ ದಂಡೆಯ ಜಮೀನುಗಳಲ್ಲಿ ಪ್ರವಾಹದ ನೀರು ಹೊಕ್ಕು ಅಪಾರ ಬೆಳೆಹಾನಿ ಸಂಭವಿಸಿದೆ.

ಇದೇ ವೇಳೆ ಹಡಗಿನಾಳ ಬಳಿಯ ನೆಲಮಟ್ಟದ ಸೇತುವೆ ಮೇಲೆ ಪ್ರವಾಹದ ನೀರು ಹರಿದ ಪರಿಣಾಮವಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಮಳೆಯಿಂದಾಗಿ  ಪಟ್ಟಣದ ಸುತ್ತಲಿನ ಅನೇಕ ಗ್ರಾಮಗಳ ಜಮೀನುಗಳ ಒಡ್ಡು- ವಾರಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಜಮೀನುಗಳು ಕೆರೆಯಂತೆ ತೋರುತ್ತಿದ್ದವು.

ರೈತರು ಬೇಸಿಗೆ ಅವಧಿಯಲ್ಲಿ ಜಮೀನಗಳಿಗೆ ದೊಡ್ಡ ಪ್ರಮಾಣದಲ್ಲಿ ಒಡ್ಡುಗಳನ್ನು  ಹಾಕಿಕೊಂಡಿದ್ದು ಜಮೀನಿನ ನೀರು ಮೀನುಗಳಲ್ಲಿಯೇ ಸಂಗ್ರವಾಗುವಂತೆ ಮಾಡಿರುವುದು ಹೆಚ್ಚಿನೆಡೆ ಲಾಭ ತಂದಿದೆ.

ಇದರಿಂದಾಗಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಭೂಮಿಯ ಆದ್ರತೆ ಹೆಚ್ಚಲು ಕಾರಣವಾಗಿದೆ. ಇನ್ನು ಕೆಲವೆಡೆ ಒಡ್ಡು-ವಾರಿಗಳು ಒಡೆದು ಹೋಗಿವೆ. ಮಳೆಯ ನಿರೀಕ್ಷೆಯಲ್ಲಿ ಇದ್ದ ರೈತರ ನಂಬಿಕೆಯನ್ನು ಹುಸಿ ಮಾಡದ ಮಳೆರಾಯ ಧೋ ಧೋ ಎಂದು ಸುರಿದು ಹರ್ಷ ಮೂಡಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.