ADVERTISEMENT

ಸಣ್ಣನೀರಾವರಿ ಕೆರೆ ಸುಧಾರಣೆಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 3:55 IST
Last Updated 11 ಫೆಬ್ರುವರಿ 2012, 3:55 IST

ತಾಳಿಕೋಟೆ: `ನೀರು ಸರ್ವ ಜೀವಿಗಳಿಗೂ ಜೀವಧಾರೆಯಾಗಿದ್ದು ಅದರ ರಕ್ಷಣೆ, ಸದ್ಬಳಕೆಯಿಂದ  ಮುಂದಿನ ಪೀಳಿಗೆಗೆ  ಸಂರಕ್ಷಿಸಿಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ~ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

ಅವರು ಸಮೀಪದ ಅಸ್ಕಿ ಗ್ರಾಮದಲ್ಲಿ ಗುರುವಾರ ರೂ. 41 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಣ್ಣ ನೀರಾವರಿ ಕೆರೆ ಸುಧಾರಣೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಕೆರೆ ನಿರ್ಮಾಣದಿಂದ ಅಂತರ್ಜಲಮಟ್ಟ ಹೆಚ್ಚಾಗಿ ಬಾವಿಗಳಲ್ಲಿ, ಬೋರವೆಲ್‌ಗಳಲ್ಲಿ ನೀರಿನ ಪಾತಳಿ ಹೆಚ್ಚುತ್ತದೆ.  ದನ-ಕರುಗಳಿಗೆ, ಬಟ್ಟೆ ತೊಳೆಯಲು ಇತ್ಯಾದಿಗಳಿಗೂ ನೀರಿನ ಲಭ್ಯತೆಯಾಗುತ್ತದೆ ಎಂದರು.

ದೇವಾಲಯ ಸಮಾನವಾದ ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ಲಜ್ಜೆಗೆಟ್ಟ ಕಾಮಕೇಳಿ ನೋಟ. ಅವರ ಸಂಸ್ಕೃತಿಯ ಪತನವನ್ನು ಎತ್ತಿ ತೋರುತ್ತಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದರೆ ಸಾಲದು ಶಾಸಕ ಸ್ಥಾನದಿಂದ ಉಚ್ಚಾಟಿಸುವ ಮೂಲಕ ಸದನದ ಪಾವಿತ್ರ್ಯವನ್ನು ಉಳಿಸಲು ಮುಖ್ಯಮಂತ್ರಿಗಳು ಹಾಗೂ  ಸ್ಪೀಕರ್ ಮುಂದಾಗಬೇಕು ಎಂದು ಆಗ್ರಹಿಸಿದರು.

ದೇವರ ಹಿಪ್ಪರಗಿ ಭಾಗದಲ್ಲಿ ಮಳೆಯ ಅಭಾವದಿಂದ ಬರಗಾಲ ಸೃಷ್ಟಿಯಾಗುತ್ತಿದೆ. ಅಂತರ್ಜಲ ಖಾಲಿಯಾಗುತ್ತಿದೆ. ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ  ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳನ್ನು ಮಂಜೂರಿ ಮಾಡಿಸಿದ್ದೇನೆ. ಅವುಗಳ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ಜನತೆಗೆ ಲಭ್ಯವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ಅಸ್ಕಿ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಢವಳಗಿ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಸಾಹೆಬಗೌಡ ಪಾಟೀಲ, ತಾ.ಪಂ.ಸದಸ್ಯ ರಡ್ಡೆಪ್ಪಗೌಡ ನಾಗರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೆಶಬಾಬು ಬಿರಾದಾರ, ಗ್ರಾ.ಪಂ. ಸದಸ್ಯರಾದ ಭೀಮನಗೌಡ ಬಿರಾದಾರ, ರಾಜುಗೌಡ ಬಿರಾದಾರ, ಭೀಮಣ್ಣ ಚಿಂಚೊಳಿ,  ಗುತ್ತಿಗೆದಾರ ಚೌಧರಿ, ಶಂಕ್ರುಗೌಡ ನಾಗರೆಡ್ಡಿ, ಆರ್.ಸಿ.ಪಾಟೀಲ, ಕಾಶಿನಾಥ ತಳವಾರ, ಮಲ್ಲು ನಾಯ್ಕಲ್ ಸೇರಿದಂತೆ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.