ADVERTISEMENT

ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:07 IST
Last Updated 5 ಸೆಪ್ಟೆಂಬರ್ 2013, 6:07 IST

ವಿಜಾಪುರ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು, ನಿರುದ್ಯೋಗ ಸಮಸ್ಯೆ ವಿರೋಧಿಸಿ ಅಖಿಲ ಭಾರತ ಪ್ರಜಾ ಸತಾತ್ಮಕ ಯುವಜನ ಸಂಘಟನೆ (ಎಐಡಿಎಸ್‌ಒ), ತೆಗ್ಗಿಹಳ್ಳಿ ಗ್ರಾಮ ಸ್ಥಳಾಂತರ ಕಾಮಗಾರಿ ತ್ವರಿತಕ್ಕೆ ಆಗ್ರಹಿಸಿ ಅಲ್ಲಿಯ ಸಂತ್ರಸ್ತರು ಬುಧ ವಾರ ಇಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ದಸಂಸ (ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಘಟಕದ ವರು ನ್ಯಾ. ಎ.ಜೆ. ಸದಾಶಿವ ಆಯೋ ಗದ ವರದಿ ಅನುಷ್ಠಾನಕ್ಕೆ ತರಬೇಕು. ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಏಕ ಗವಾಕ್ಷಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕರೆಕಲ್ಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಶೈಲ ಹೆಬ್ಬಾಳ, ಜಿಲ್ಲಾ ಘಟಕದ ಗೌರವಾ ಧ್ಯಕ್ಷ ಶರಣು ಸಿ.ದೊಡಮನಿ, ಪ್ರಕಾಶ ಭೈರವಾಡಗಿ, ಅಶೋಕ ನಂದಿ ಇತರರು ಪಾಲ್ಗೊಂಡಿದ್ದರು.

ಎಐಡಿಎಸ್‌ಒ: ಉದ್ಯೋಗ ಮೂಲ ಭೂತ ಹಕ್ಕಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಿಗೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಎಐಡಿ ಎಸ್‌ಒ ಸಂಘಟನೆಯವರು ಗಾಂಧಿ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಳು ಜೇವೂರ, ಕಳೆದ ಐದು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿಲ್ಲ. ಶೀಘ್ರ ನೇಮಕಾತಿ ಮಾಡಿಕೊಳ್ಳಬೇಕು ಎಂದರು.

ಸಿದ್ಧಲಿಂಗ ಬಾಗೇವಾಡಿ, ಸಚಿನ್ ತಳವಾರ, ಉಮೇಶ ಬಿ.ಆರ್., ಮುಬಾರಕ, ಡಿಎಡ್ ಹೋರಾಟ ಸಮಿತಿ ಸಂಚಾಲಕ ಭೀಮರಾಯ ಮಾದರ, ದಶರಥ, ಬಸವರಾಜ ಅಥಣಿ, ಶೋಭಾ, ಗೀತಾ, ಅನಿತಾ, ಸವಿತಾ, ರಷ್ಮಿ ಭಾಗವಹಿಸಿದ್ದರು.

ತೆಗ್ಗಿಹಳ್ಳಿ: ನೆರೆಹಾವಳಿ ಪೀಡಿತ ಇಂಡಿ ತಾಲ್ಲೂಕು ತೆಗ್ಗಿಹಳ್ಳಿ ಸ್ಥಳಾಂತರ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕು. ರಸ್ತೆ ರಿಪೇರಿ ಮಾಡಬೇಕು ಎಂದು ಅಲ್ಲಿಯ ನಿವಾಸಿಗಳಾದ ಶೇಖರ ಹೊಸಮನಿ, ಪಿ.ಎಂ. ಚೌಕಾಯಿ, ಗಂಗಾಧರ ಬೀರನಳ್ಳಿ, ಕೇಸು ಕಾಂಬಳೆ ಇತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.