ADVERTISEMENT

ಸನಾತನ ಸಂಸ್ಕೃತಿ ಉಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:42 IST
Last Updated 30 ಮಾರ್ಚ್ 2018, 6:42 IST
ದೇವರಹಿಪ್ಪರಗಿ ತಾಲ್ಲೂಕು ಗಂಗನಳ್ಳಿ ಗ್ರಾಮದಲ್ಲಿ ನಡೆದ ‘ಹಂತಿ ಹಬ್ಬ ಮತ್ತು ಸತ್ಸಂಗದ ಸಂಸ್ಕಾರ’ವನ್ನು ತದ್ದೇವಾಡಿ ಮಠದ ಮಹಾಂತೇಶ ಸ್ವಾಮಿ ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿದರು
ದೇವರಹಿಪ್ಪರಗಿ ತಾಲ್ಲೂಕು ಗಂಗನಳ್ಳಿ ಗ್ರಾಮದಲ್ಲಿ ನಡೆದ ‘ಹಂತಿ ಹಬ್ಬ ಮತ್ತು ಸತ್ಸಂಗದ ಸಂಸ್ಕಾರ’ವನ್ನು ತದ್ದೇವಾಡಿ ಮಠದ ಮಹಾಂತೇಶ ಸ್ವಾಮಿ ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿದರು   

ದೇವರಹಿಪ್ಪರಗಿ: ‘ಜನಪದ ಕಲೆ, ಕಲಾವಿದರನ್ನು ಬೆಳೆಸುವ ಮೂಲಕ ದೇಶದ ಸನಾತನ ಸಂಸ್ಕೃತಿಯನ್ನು ಉಳಿಸಬೇಕು’ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.

ತಾಲ್ಲೂಕಿನ ಗಂಗನಳ್ಳಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವೇಶ್ವರ ಹಂತಿ ಮೇಳದ ಸಹಯೋಗದಲ್ಲಿ ನಡೆದ ಹಂತಿ ಹಬ್ಬ ಮತ್ತು ಸತ್ಸಂಗದ ಸಂಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜನಪದ ಸಂಸ್ಕೃತಿಯು ಇಂದು ಅನಾದಾರಕ್ಕೆ ಒಳಗಾಗುತ್ತಿದೆ ಎಂದು ವಿಷಾದಿಸಿದರು.

ಶಿರಸ್ತೇದಾರ್‌ ಮೋಹನ ಕಟ್ಟಿಮನಿ ಮಾತನಾಡಿ, ‘ಸರಳ ಹೃದಯದ ಜನಪದ ಕಲಾವಿದರು ನಮ್ಮ ಸಂಸ್ಕೃತಿಯ ವಾರಸುದಾರರಾಗಿದ್ದಾರೆ. ಗಂಗನಳ್ಳಿಯ ಹಂತಿ ಹಬ್ಬ ಮತ್ತು ಸತ್ಸಂಗ ವೈಚಾರಿಕತೆಯ ವಿಷಯವಾಗಿದೆ’ ಎಂದು ತಿಳಿಸಿದರು.

ADVERTISEMENT

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ‘ವಿಜಯಪುರ ಜಿಲ್ಲೆಯ ಜಾನಪದ ಕಲೆ ಸಮೃದ್ಧ ನೆಲೆಯಾಗಿದ್ದು, ಕಲೆ ಮತ್ತು ಕಲಾವಿದರಿಗಾಗಿ ಕಜಾಪ ಹಗಲಿರುಳು ಶ್ರಮಿಸುತ್ತಿದೆ. ಕಾಲಮಾನಕ್ಕೆ ತಕ್ಕಂತೆ ಕಲಾವಿದರು ಬದಲಾಗಿ ಕಲಾ ಪ್ರದರ್ಶನ ನೀಡಬೇಕಿದೆ’ ಎಂದರು.

ಹಂತಿ ಹಬ್ಬದಲ್ಲಿ ಸಾಲೋಟಗಿ, ಸಾತಪುರ, ಗಂಗನಳ್ಳಿ, ನರಸಲಗಿ ಕಲಾವಿದರು ಇಡೀ ರಾತ್ರಿ ಹಂತಿ ಹೊಡೆಯುತ್ತಾ, ಪದಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.

ತದ್ದೇವಾಡಿ ಮಠದ ಮಹಾಂತೇಶ ಸ್ವಾಮಿ, ಕಾಂಗ್ರೆಸ್ ಧುರೀಣ ಬಸವರಾಜ ಕೊಕಟನೂರ, ಸದಾಶಿವ ಕರ್ಜಗಿ, ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಪಾಟೀಲ, ಸುರೇಶಗೌಡ ಪಾಟೀಲ (ಸಾಸನೂರ), ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲಲಿತಾ ದೊಡಮನಿ, ದೇವರಹಿಪ್ಪರಗಿ ತಾಲ್ಲೂಕು ಕಜಾಪ ಅಧ್ಯಕ್ಷ ನಾನಾಗೌಡ ಪಾಟೀಲ, ಶಿವಾನಂದ ಮಂಗಾನವರ, ಪ್ರೊ.ಶಿವಾನಂದ ವಾಲೀಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.