ADVERTISEMENT

ಸಮಗ್ರ ನೀರಾವರಿಗೆ ಸಹಕಾರ: ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:55 IST
Last Updated 16 ಸೆಪ್ಟೆಂಬರ್ 2013, 6:55 IST

ವಿಜಾಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಾಪುರ ಜಿಲ್ಲೆಯವರಿಗೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ.  ಈ ಅವಕಾಶ ಸದುಪಯೋಗ ಪಡಿಸಿಕೊಂಡು ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೊಳಪಡಿಸಲು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ನಾನು ಒಂದೇ ಮನಸ್ಸಿನಿಂದ ಕಾರ್ಯನಿರ್ವಹಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ಡಿಸಿಸಿ ಬ್ಯಾಂಕ್‌ ಸಿಬ್ಬಂದಿ ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು. ‘ಡಿಸಿಸಿ ಬ್ಯಾಂಕ್‌ ನನ್ನ ಹೃದಯ. ನನ್ನ ರಾಜಕೀಯ, ಸಾಮಾಜಿಕ ಜೀವನಕ್ಕೆ ಈ ಬ್ಯಾಂಕ್‌ ಸ್ಪೂರ್ತಿ. ಈ ಬ್ಯಾಂಕ್‌ನ  ಅಭಿವೃದ್ಧಿಯೇ ನನ್ನ ಉಸಿರು. ಸಮಗ್ರ ಅಭಿವೃದ್ಧಿಗೆ ಸಿಬ್ಬಂದಿ, ಆಡಳಿತ ಮಂಡಳಿಯವರ ಸಹಕಾರ ಅನನ್ಯ’ ಎಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಶಿವಾನಂದ ಪಾಟೀಲ ಅವರ ಪತ್ನಿ ಭಾಗ್ಯಶ್ರೀ ಪಾಟೀಲ, ಬ್ಯಾಂಕ್‌ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ‘ನೇರ, ದಿಟ್ಟ ರಾಜಕಾರಣಿ ಶಾಸಕ ಶಿವಾನಂದ ಪಾಟೀಲ ಅವರ ಯಶಸ್ಸಿನ ಹಿಂದೆ ಅವರ ಧರ್ಮ ಪತ್ನಿಯ ಪರಿಶ್ರಮವಿದೆ. ಶಿವಾನಂದರು ಮುಂದೆ ಸಚಿವರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸುವಂತಾಗಲಿ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆರ್.ಬಿ. ಗುಡದಿನ್ನಿ, ‘ಶಾಸಕ ಶಿವಾನಂದ ಪಾಟೀಲರ ಅಧ್ಯಕ್ಷತೆಯಲ್ಲಿ ಡಿಸಿಸಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಪಥದತ್ತ ಸಾಗಿದೆ. ಜಿಲ್ಲೆಯ ಸಹಕಾರ ಕ್ಷೇತ್ರ ಗಟ್ಟಿಯಾಗಿ ನೆಲೆಗೊಳ್ಳಲು ಹಾಗೂ ಹೆಚ್ಚಿನ ಪ್ರಗತಿ ಸಾಧಿಸಲು ಅವರ ದೂರದೃಷ್ಠಿ ಹಾಗೂ ಮಾರ್ಗದರ್ಶನ ಕಾರಣ‘ ಎಂದು ಅವರು ಶ್ಲಾಘಿಸಿದರು.

ಸಾನಿಧ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಉತ್ಸಾಹಿ ಯುವಕರಾಗಿರುವ ಶಿವಾನಂದ ಪಾಟೀಲರ ಅವಧಿಯಲ್ಲಿ ಜಿಲ್ಲೆ ಸಮಗ್ರ ನೀರಾವರಿಗೊಳಪಡುವಲ್ಲಿ ಸಂದೇಹ ಇಲ್ಲ ಎಂದರು. ಸೇವಾ ನಿವೃತ್ತಿ ಹೊಂದಿದ ಡಿಸಿಸಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ವಿ.ಡಿ. ಮಾದನಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನಂದಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಸಹಕಾರಿ ಸಂಘಗಳ ಹೆಚ್ಚುವರಿ ನಿಬಂಧಕ ನಾರಾಯಣಪ್ಪ, ಡಿಸಿಸಿ ಬ್ಯಾಂಕಿನ ಆಡಳಿತ ಆಡಳಿತ ಮಂಡಳಿಯ ಸಲಹೆಗಾರ ಜೆ. ಕೋಟ್ರೇಶಿ, ಬ್ಯಾಂಕಿನ ನಿರ್ದೇಶಕರು ಪಾಲ್ಗೊಂಡಿದ್ದರು. ಡಿಸಿಸಿ ಬ್ಯಾಂಕಿನ ನಿರ್ದೆೇಶಕ ಸಂಜಯ ಪಾಟೀಲ (ಕನಮಡಿ) ಸ್ವಾಗತಿಸಿದರು. ಸತೀಶ್‌ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT