ADVERTISEMENT

ಸಮಸ್ಯೆ ಪರಿಹಾರಕ್ಕೆ ಆಗ್ರಹ: ಜು. 4ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 6:00 IST
Last Updated 21 ಜೂನ್ 2011, 6:00 IST

ವಿಜಾಪುರ: ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಲು ಸರ್ಕಾರ ಆದ್ಯತೆ ನೀಡುವಂತೆ ಆಗ್ರಹಿಸಿ ಜುಲೈ 4 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಹುಜನ ಸಮಾಜ ಪಕ್ಷ ತಿಳಿಸಿದೆ.

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ ನಡೆಸಲಾಗುವದು. ಪ್ರತಿಭಟನೆಯಲ್ಲಿ  ರೈತರು, ಕೂಲಿ ಕಾರ್ಮಿಕರು ಪಾಲ್ಗೊಂಡುತ ತಮ್ಮ ಹಕ್ಕುಗಳ ಪ್ರತಿಪಾದನೆ ಮಾಡುವರು ಎಂದರು.

ವಿದ್ಯುತ್ ಯೋಜನೆ ಪರಿಸರ ವಿರೋಧಿ ಧೋರಣೆ ಆಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವುದು ಸಮಸ್ಯೆಯಲ್ಲ. ಈ ಹೊಲಗಳಲ್ಲಿ ಕೆಲಸ ಮಾಡುವ ಭೂರಹಿತ ಕೃಷಿ ಕಾರ್ಮಿಕರಿಗೂ ಕೂಡ ಪರಿಹಾರ ಹಾಗೂ ಪುನರ್‌ವಸತಿ ಕಲ್ಪಿಸಬೇಕು ಎಂದು ಹೇಳಿದರು.

ನೈರ್ಮಲ್ಯ ನಿರ್ಲಕ್ಷ್ಯ
ಐತಿಹಾಸಿಕ ವಿಜಾಪುರ ನಗರ ಕೊಚ್ಚೆ ಗುಂಡಿಯಾಗಿದೆ. ಪ್ರವಾಸಿಗರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಚರಂಡಿಗಳು ಕಾರಂಜಿಯಂತೆ ಪುಟಿಯುತ್ತಿವೆ. ನಗರಸಭೆ ಮತ್ತು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ನೀಡುತ್ತಿಲ್ಲ. ಅಧಿಕಾರಿಗಳು, `ಟೆಂಡರ್ ಕರೆದಿದ್ದೇವೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗುವುದು~ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ, ತಳೆವಾಡ ಹಾಗೂ ಕಲಗುರ್ಕಿ ಗ್ರಾಮಗಳ ಭೂ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಪರಿಸರಕ್ಕೆ ಅಪಾಯಕಾರಿ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದರು.

ಶಾಸಕರೇ ಹೊಣೆ
ಸ್ಥಳೀಯ ನಗರ ಸಭೆಯು ಭ್ರಷ್ಟಾಚಾರದ ಕೇಂದ್ರವಾಗಿದೆ. ಇದಕ್ಕೆಲ್ಲ ನಗರ ಶಾಸಕರೇ ನೇರವಾಗಿ ಹೊಣೆಗಾರರಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಹಾಬರಿ ಒತ್ತಾಸಿದರು.

ನಗರದಲ್ಲಿ ಮಾಸ್ಟರ್ ಪ್ಲಾನ್ ಅಳವಡಿಸಲು ಹಲವೆಡೆ ಗುರುತಿಸಲಾಗಿದೆ. ಅದರ ವ್ಯಾಪ್ತಿಯೊಳಗಿನ ಸಾರ್ವಜನಿಕ ಆಸ್ತಿಗಳಿಗೆ ಪರಿಹಾರ ಹಾಗೂ ಪರ‌್ಯಾಯ ವ್ಯವಸ್ಥೆ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಎಷ್ಟು ದಿನದೊಳಗೆ ಯೋಜನೆ ಜಾರಿ ಆಗಲಿದೆ ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಆಗ್ರಸಿದರು.

ಪತ್ರಿಕಾಗೊಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಧರ್ಮಣ್ಣ ತೊಂಟಾಪುರ, ಜಿಲ್ಲಾಧ್ಯಕ್ಷ ಸುಧಾಕರ ಕನಮಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯ್ಕ್‌ಡಿ, ನಗರ ಅಧ್ಯಕ್ಷ ಶಬ್ಬೀರ ಜಾಗಿರದಾರ, ನಗರ ಸಂಚಾಲಕ ಲತಿಪ್ ಮಹಾಬರಿ, ನಗರ ಪ್ರಧಾನ ಕಾರ್ಯದರ್ಶಿ ಜಾಫರ್ ಇನಾಮದಾರ, ಮುಖಂಡರಾದ ಸಚ್ಚೇಂದ್ರ ಲಂಭು, ಸಾಧಿಕ್ ಕೊಲಾರ, ಹಮೀದ್ ಮಕಾನದಾರ ಹಾಗೂ ಮುನಿರ್ ಅಹಮದ್ ಶೇಖ ಉಪಸ್ಥಿತರಿದ್ದರು.

ಕರ್ನಾಟಕ ಕೌನ್ಸಿಲ್ ಸಭೆ ಜು. 2ರಂದು
ಆಲಮಟ್ಟಿ: ಮುಸ್ಲಿಂ ಸಮುದಾಯದಲ್ಲಿ ವ್ಯಾಪಕವಾಗಿರುವ ಆಂತರಿಕ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಸಮುದಾಯ ಸಂಘಟನೆಯ ಉದ್ದೇಶದಿಂದ ಜುಲೈ 2ರಂದು ಆಲಮಟ್ಟಿಯಲ್ಲಿ ಮುಖಂಡರ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಿಸಾಲ್ದಾರ ಹೇಳಿದರು."

ಗ್ರಾಮದಲ್ಲಿ ಜರುಗಿದ ಸಂಘಟನೆಯ ಸಭೆಯಲ್ಲಿ ಅವರು ಮಾತನಾಡಿ, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಮಾಜದ ಮುಖಂಡರು, ಹಿತಚಿಂತಕರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು.

ಎಲ್ಲ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸಮುದಾಯದ ಹಕ್ಕು ಮತ್ತು ನ್ಯಾಯಕ್ಕಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ಗ್ರಾ.ಪಂ. ಸದಸ್ಯ ಕಾಶೀಮಸಾಹೇಬ ನಿಡಗುಂದಿ, ಎಲ್.ಕೆ. ನದಾಫ್, ಡಿ.ಎನ್. ಹಾಲಿಹಾಳ, ಸಲೀಂ ದಡೇದ, ಎಂ.ಎಂ. ಮುಲ್ಲಾ ಮಾತನಾಡಿದರು.

ಎ.ಎಲ್. ಮುಲ್ಲಾ ಸ್ವಾಗತಿಸಿ ನಿರೂಪಿಸಿದರು. ಇಸಾಕ್ ಪಟೇಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.