ADVERTISEMENT

`ಸರ್ಕಾರಿ ಶಾಲೆಗಳಿಂದ ಸಾಮಾಜಿಕ ನ್ಯಾಯ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:32 IST
Last Updated 6 ಏಪ್ರಿಲ್ 2013, 5:32 IST

ತಾಳಿಕೋಟೆ: ಹೆಚ್ಚುತ್ತಿರುವ ಖಾಸಗಿ ಶಾಲೆಗಳ ಹಾವಳಿಯಿಂದ ಸಾರ್ವಜನಿಕರು ಅತ್ತ ಆಕರ್ಷಿತರಾಗುತ್ತಿದ್ದಾರೆ.  ಈ ಸವಾಲನ್ನು ಸ್ವೀಕರಿಸಿ ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುವಂತೆ ಮಾಡಲು ಅಗತ್ಯವಿರುವ ಕಾರ್ಯತಂತ್ರವನ್ನು  ರೂಪಿಸ ಬೇಕು ಎಂದು ಶಿಕ್ಷಣ ಸಂಯೋಜಕ ಎಸ್.ಎಸ್.ಗಡೇದ ಮನವಿ ಮಾಡಿದರು.

ಅವರು ಪಟ್ಟಣದ ಕನ್ನಡ ಮಾದರಿ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ತಾಳಿಕೋಟೆ ಶಿಕ್ಷಣ ಸಂಯೋಜಕರ ವ್ಯಾಪ್ತಿಯ ಮುಖ್ಯಶುಕ್ಷಕರ ಸಭೆಯಲ್ಲಿ ಮಾತನಾಡಿದರು. ಖಾಸಗಿ ಶಾಲೆಗಳಿಗಿಂತ ಉನ್ನತ ದರ್ಜೆಯ ಗುಣಮಟ್ಟ ಹೊಂದಿದ ಶಿಕ್ಷಕರು, ಸಂತಸದಾಯಕ ಕಲಿಕೆಯನ್ನು ಪ್ರೋತ್ಸಾಹಿಸುವ ನಲಿ-ಕಲಿ ಯೋಜನೆ, ಅಪಾರ ಬೋಧನಾ ಸಾಮಗ್ರಿಗಳು,  ಶಾಲಾ ಕಟ್ಟಡ, ಶಾಲಾ ಮೈದಾನ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಬೈಸಿಕಲ್‌ಗಳಂತಹ ಪ್ರೋತ್ಸಾಹದಾಯಕ ಯೋಜನೆಗಳ ಬಲವಿದ್ದರೂ ಸಾರ್ವಜನಿಕರು ಸರ್ಕಾರಿ ಶಾಲೆಗಳತ್ತ ನಿರಾಸಕ್ತಿ ಹೊಂದುತ್ತಿರುವ ಕಾರಣಗಳನ್ನು ಕುರಿತು ನಾವೆಲ್ಲ ಆತ್ಮಾವಲೋಕನ ಮಾಡಕೊಳ್ಳಬೇಕಿದೆ ಎಂದರು.

ಸರ್ಕಾರಿ ಶಾಲೆಗಳು ಸಾಮಾಜಿಕ ನ್ಯಾಯ ನೀಡುತ್ತವೆ. ಇಲ್ಲಿ ಆರ್ಥಿಕ, ಸಾಮಾಜಿಕ  ದುರ್ಬಲರೂ ಅವಕಾಶ ಪಡೆಯುತ್ತಾರೆ. ಅಂತಹ ಕುಟುಂಬಗಳಿಂದ ಬಂದ ಮಕ್ಕಳು ತಮ್ಮ ಕುಟುಂಬದ ಕೆಲಸಗಳನ್ನು ನಿರ್ವಹಿಸಿಕೊಂಡು  ಸಮಯ ಸಿಕ್ಕಾಗ ಶಾಲೆಗೆ ಬರುತ್ತಿದ್ದಾರೆ.

ಇಂತಹ ಅನಿಯಮಿತ ಮಕ್ಕಳನ್ನು ಸರಿಯಾಗಿ ನಿರ್ವಹಣೆ ಮಾಡುವ ಸವಾಲು ನಮಗಿದೆ ಎಂದರು.   ಸಿಆರ್‌ಪಿಗಳಾದ  ಪಿ.ಎ. ಮುಲ್ಲಾ, ಎಚ್.ಬಿ.ಕರಕಳ್ಳಿ, ರಾಜು ವಿಜಾಪುರ, ಸಂಗಮೇಶ ಪಾಲಕಿ, ಎ.ಜೆ.ಕೆಂಭಾವಿ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಭರತೇಶ ಹೊಳಿ, ಮಹಿಳಾ ಪ್ರತಿನಿಧಿ ಐ.ಟಿ. ಥಬ್ಬಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.