ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:10 IST
Last Updated 19 ಅಕ್ಟೋಬರ್ 2012, 5:10 IST

ವಿಜಾಪುರ: ಜಿಲ್ಲೆಯಲ್ಲಿ 2013ರ ಫೆಬ್ರುವರಿ ಮೊದಲ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ವಿವಿಧ ಸಮಾನಾಂತರ ವೇದಿಕೆಗಳ ಸ್ಥಾಪನೆಗಾಗಿ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಗುರುವಾರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ನಗರ ಶಾಸಕ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ನಗರದ ಸೈನಿಕ ಶಾಲೆ ಆವರಣ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಅಥವಾ ಬಿ.ಎಲ್.ಡಿ.ಇ. ಕಾಲೇಜು ಆವರಣದಲ್ಲಿ ಸಮ್ಮೇಳನ ನಡೆಸುವ ಕುರಿತಂತೆ ಚಿಂತನೆ ನಡೆದಿದ್ದು, ಇಂದೇ ಸ್ಥಳ ಪರಿಶೀಲನೆ ನಡೆಸಿ ಶೀಘ್ರವೇ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

ಐತಿಹಾಸಿಕ ನಗರವಾದ ವಿಜಾಪುರದಲ್ಲಿ ಬಹುವರ್ಷದ ನಂತರ ಸಮ್ಮೇಳನ ನಡೆಸುವ ಅವಕಾಶ ದೊರೆತಿದ್ದು, ಸಮ್ಮೇಳನವನ್ನು ಅಚ್ಚುಕಟ್ಟಾಗಿ ಅತ್ಯಂತ ಅದ್ದೂರಿಯಾಗಿ ನಡೆಸುವ ಕುರಿತಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಈ ಕುರಿತಂತೆ ಈಗಾಗಲೇ ಸ್ವಾಗತ ಸಮಿತಿ ರಚನೆಯಾಗಿದ್ದು, ಶೀಘ್ರವೇ ವಿವಿಧ ಉಪ ಸಮಿತಿಯನ್ನು ರಚಿಸಲಾಗುವುದು. ಖಚಿತ ದಿನಾಂಕವನ್ನು ಪ್ರಕಟಿಸಿ ಸೂಕ್ತ ಸ್ಥಳವನ್ನು ಸದ್ಯದಲ್ಲೇ ಆಯ್ಕೆ ಮಾಡಿ ಪ್ರಕಟಿಸಲಾಗುವುದು ಎಂದು ಹೇಳಿದರು.

ವಸತಿ ಸೌಕರ್ಯ, ಪ್ರಚಾರ ವ್ಯವಸ್ಥೆ, ವೇದಿಕೆಯ ಆಸನ ಸಾಮರ್ಥ್ಯ, ಸಾರಿಗೆ, ಇತರ ವಿಚಾರಗಳನ್ನು ಪ್ರಾಸಂಗಿಕವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ: ಡಿ.ಸಿ.ರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರು, ಸೇರಿದಂತೆ ವಿವಿಧ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ರಚನೆ
 ಅಖಿಲ ಭಾರತ 79ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಫೆಬ್ರುವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದು, ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.  ಮಹಾಪೋಷಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಗೋವಿಂದ ಎಂ. ಕಾರಜೋಳ, ಪೋಷಕರಾಗಿ ಸಂಸದ ರಮೇಶ ಜಿಗಜಿಣಗಿ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಕೆ.ಬೆಳ್ಳುಬ್ಬಿ, ಕಾರ್ಯಾಧ್ಯಕ್ಷರಾಗಿ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಿರಿಯ ಉಪಾಧ್ಯಕ್ಷರಾಗಿ ಎಂ.ಬಿ.ಪಾಟೀಲ, ವಿಠ್ಠಲ ಕಟಕಧೋಂಡ, ಉಪಾಧ್ಯಕ್ಷರಾಗಿ ಸಿ.ಎಸ್. ನಾಡಗೌಡ, ಎಸ್.ಆರ್.ಪಾಟೀಲ, ಡಾ: ಸಾರ್ವಭೌಮ ಬಗಲಿ, ಮಹಾಂತೇಶ ಕೌಜಲಗಿ, ಜಿ.ಎಸ್. ನ್ಯಾಮಗೌಡ, ರಮೇಶ ಭೂಸನೂರ, ಎ.ಎಸ್. ಪಾಟೀಲ, ಅರುಣ ಶಹಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಸರಕಾರಿ ನೌಕರರ ಸಂಘ, ಕೋಶಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಕನ್ನಡ ಸಾಹಿತ್ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿಯವನ್ನು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.