ADVERTISEMENT

ಸಿಂದಗಿ: ಚುರುಕುಗೊಂಡ ಕೃಷಿ ಚಟುವಟಿಕೆ

ಕೃಷಿ ಕೂಲಿ ಕಾರ್ಮಿಕರಿಗೆ ವರವಾದ ವರ್ಷಧಾರೆ; ಹೊಲಗಳಲ್ಲಿ ಭರಪೂರ ಕೆಲಸ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 6:48 IST
Last Updated 2 ಜೂನ್ 2018, 6:48 IST

ಸಿಂದಗಿ: ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದಂತೆ, ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿವೆ. ರೈತ ಸಮುದಾಯ ಹುಮ್ಮಸ್ಸಿನಿಂದ ಬಿತ್ತನೆಗೆ ಭೂಮಿ ಹದಗೊಳಿಸಲು ಮುಂದಾಗಿದೆ.

ಇದೀಗ ತಾಲ್ಲೂಕಿನ ಎಲ್ಲೆಡೆ ನೇಗಿಲು ಹೊಡೆಯುವುದು ಸೇರಿದಂತೆ, ಬಿತ್ತನೆಗೆ ಭೂಮಿ ಹದಗೊಳಿಸುವ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ಇನ್ನೊಂದು ಹದ ಮಳೆ ಸುರಿದರೆ ಬಿತ್ತನೆ ಶುರುವಾಗಲಿದೆ. ಕೃಷಿ ಕೂಲಿ ಕಾರ್ಮಿಕರು ಕೂಲಿ ಸಿಕ್ಕ ಸಂತಸದಿಂದ ಹೊಲಗಳಲ್ಲಿ ದುಡಿಯುವ ದೃಶ್ಯಾವಳಿ ಎಲ್ಲೆಡೆ ಗೋಚರಿಸುತ್ತಿದೆ.

‘ರೋಹಿಣಿ ಮಳೆ ಆರಂಭದಲ್ಲೇ ಆಶಾದಾಯಕ ಆಗ್ಯಾದ. ಹಸಿ ಮಳಿ ಪಾಡ ಆಗಿದ್ರಿಂದ ಬಿತ್ತನೆಗೆ ಚಲೋ ಆಗತೈತಿ. ಹೊಲ ಹರಗಲು ಶುರು ಮಾಡೀವಿ. ಆರೇಳು ದಿನದಾಗ ಬಿತ್ತನೆ ಮಾಡುವ ಕೆಲಸವನ್ನೂ ಚಾಲೂ ಮಾಡ್ತೀವಿ’ ಎಂದು ಸಿಂದಗಿ ಪಟ್ಟಣದ ರೈತ ಶೇಖಪ್ಪ ಲೋಣಿ ತಿಳಿಸಿದರು.

ADVERTISEMENT

ದೇವರಹಿಪ್ಪರಗಿ ತಾಲ್ಲೂಕು ಕೇಂದ್ರವಾಗಿ ಬೇರ್ಪಟ್ಟರೂ; ಕೃಷಿ ಇಲಾಖೆ ಇನ್ನೂ ವಿಭಜನೆಗೊಂಡಿಲ್ಲ. 142 ಗ್ರಾಮಗಳು ಇಲಾಖೆ ವ್ಯಾಪ್ತಿಗೆ ಬರಲಿದ್ದು, ಸಿಂದಗಿ, ದೇವರಹಿಪ್ಪರಗಿ, ಆಲಮೇಲ ಪಟ್ಟಣ ವ್ಯಾಪ್ತಿಯಲ್ಲಿ ಮೂರು ರೈತ ಸಂಪರ್ಕ ಕೇಂದ್ರಗಳಿವೆ.

‘ಈ ಮೂರು ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ರೈತರು ಭೂಮಿ ಸಿದ್ಧತಾ ಕಾರ್ಯವನ್ನು ಭರದಿಂದ ಕೈಗೊಂಡಿದ್ದಾರೆ. ಬಿತ್ತನೆ ಶುರುವಾಗಬೇಕಿದೆ. ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಉದ್ದು, ಸಜ್ಜೆ, ಮುಸುಕಿನ ಜೋಳ, ನವಣೆ, ಸೂರ್ಯಕಾಂತಿ ಬೀಜಗಳನ್ನು ದಾಸ್ತಾನು ಮಾಡಲಾಗುತ್ತಿದೆ.

ಬೀಜ ಮಾರಾಟಗಾರರು ಈಗಾಗಲೇ ಗುಣಮಟ್ಟದ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಒಳಗೊಂಡಂತೆ 193 ರಸಗೊಬ್ಬರ ಮಾರಾಟಗಾರರು ಇದ್ದಾರೆ. ಪ್ರಸಕ್ತ ಹಂಗಾಮಿಗೆ ರಸಗೊಬ್ಬರದ ಯಾವುದೇ ಕೊರತೆ ಇಲ್ಲ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 56.8 ಸೆಂ.ಮೀ. ಇದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 90,445 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗುವುದು. ಹಿಂಗಾರಿ ಹಂಗಾಮಿನಲ್ಲಿ 1,15,755 ಹೆಕ್ಟೇರ್, ಬೇಸಿಗೆಯಲ್ಲಿ 5400 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಒಟ್ಟು 34896 ಸಣ್ಣ ರೈತರು, 8050 ಅತಿ ಸಣ್ಣ ರೈತರು ಒಳಗೊಂಡಂತೆ 59792 ಕೃಷಿ ಕಾರ್ಮಿಕರು ಇದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಮುಖ ಬೆಳೆಗಳು: ತಾಲ್ಲೂಕಿನಲ್ಲಿ ಆಳವಾದ ಕಪ್ಪು ಮಣ್ಣು ಮತ್ತು ಮಧ್ಯಮ ಕಪ್ಪು ಮಣ್ಣು ಇದೆ. ಮುಂಗಾರಿಯಲ್ಲಿ ಸಜ್ಜೆ, ಮುಸುಕಿನ ಜೋಳ, ತೊಗರಿ, ಹೆಸರು, ಹತ್ತಿ, ಸೂರ್ಯಕಾಂತಿ, ಶೇಂಗಾ, ಹಿಂಗಾರಿಯಲ್ಲಿ ಹಿಂಗಾರಿ ಜೋಳ, ಗೋದಿ, ಕಬ್ಬು, ಕಡಲೆ, ಸೂರ್ಯಕಾಂತಿ ಬೆಳೆಯಲಾಗುತ್ತದೆ ಎಂದು ಸಿಂಗೆಗೋಳ ತಿಳಿಸಿದರು.

ವಾಡಿಕೆ ಮಳೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಏಳು ಮಳೆ ಮಾಪನ ಕೇಂದ್ರಗಳಿವೆ. ಇಲ್ಲಿಯವರೆಗೆ ಸಿಂದಗಿ–3.02 ಸೆಂ.ಮೀ, ಸಾಸಾಬಾಳ–0.52, ಆಲಮೇಲ–2.69, ರಾಮನಳ್ಳಿ–0.52, ದೇವರಹಿಪ್ಪರಗಿ–8.04, ಕೊಂಡಗೂಳಿ–5.40, ಕಡ್ಲೇವಾಡ ಮಳೆ ಮಾಪನ ಕೇಂದ್ರದಲ್ಲಿ 1.43 ಸೆಂ.ಮೀ ಮಳೆಯಾಗಿರುವುದು ದಾಖಲಾಗಿದೆ.

ಮೇ ತಿಂಗಳ ವಾಡಿಕೆ ಮಳೆ 3.13 ಸೆಂ.ಮೀ ಇದ್ದು, 3.10 ಸೆಂ.ಮೀ. ವರ್ಷಧಾರೆಯಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

**
ಮುಂಗಾರು ಆರಂಭಗೊಂಡ ಬೆನ್ನಿಗೆ ಕೃಷಿ ಇಲಾಖೆಯೂ ಚುರುಕಾಗಿದೆ. ರೈತರ ಕೃಷಿ ಚಟುವಟಿಕೆಗೆ ಪೂರಕವಾಗಿ ಸಜ್ಜಗೊಂಡಿದೆ
ಎಚ್.ವೈ.ಸಿಂಗೆಗೋಳ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

ಶಾಂತೂ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.