ADVERTISEMENT

ಸಿಬ್ಬಂದಿ ಹೊರೆ ಇಳಿಸಿದ ಆಕಾಂಕ್ಷಿಗಳು!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:02 IST
Last Updated 22 ಏಪ್ರಿಲ್ 2013, 6:02 IST

ವಿಜಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಬಹುಪಾಲು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ಸು ಪಡೆದುಕೊಳ್ಳುವ ಮೂಲಕ ಚುನಾವಣೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಶ್ರಮವನ್ನು ಕಡಿಮೆ ಮಾಡಿದ್ದಾರೆ.

ವಿಜಾಪುರ ನಗರ, ಬಬಲೇಶ್ವರ ಮತ್ತು ನಾಗಠಾಣ ಕ್ಷೇತ್ರಗಳಲ್ಲಿ ಇನ್ನು ಕೇವಲ ಒಬ್ಬ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿ ಉಳಿದಿದ್ದರೂ ಚುನಾವಣೆ ಸಿಬ್ಬಂದಿಯ ಹೊರೆ ಇಮ್ಮಡಿಯಾಗುತ್ತಿತ್ತು!

ಅಚ್ಚರಿಯಾದರೂ ಇದು ನಿಜ
ಚುನಾವಣೆಗೆ ಮತಯಂತ್ರ ಬಳಸಲಾಗುತ್ತಿದೆ. ಒಂದು ಮತ ಯಂತ್ರದಲ್ಲಿ 16 ಗುಂಡಿಗಳಿರುತ್ತವೆ. 16 ಜನ ಅಭ್ಯರ್ಥಿಗಳ ಪಟ್ಟಿ ಹಾಗೂ ಅವರ ಚುನಾವಣೆ ಚಿಹ್ನೆಯನ್ನು ಅಂಟಿಸಲು ಅವಕಾಶವಿದೆ. 16ಕ್ಕಿಂತ ಹೆಚ್ಚು ಅಂದರೆ ಕನಿಷ್ಠ 17 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಎರಡು ಮತಯಂತ್ರಗಳನ್ನು ಬಳಸಬೇಕಾಗಿತ್ತು.

`ನಮ್ಮಲ್ಲಿ ಅತಿ ಹೆಚ್ಚು ಅಂದರೆ 16 ಜನ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಒಂದೊಂದೇ ಮತಯಂತ್ರ ಬಳಸುತ್ತಿದ್ದೇವೆ. ಎರಡನೇ ಮತ ಯಂತ್ರ ಜೋಡಿಸುವ ಪ್ರಮೇಯ ಉಂಟಾಗಿಲ್ಲ' ಎನ್ನುತ್ತಾರೆ ತಹಶೀಲ್ದಾರ ಔದ್ರಾಮ್.

ಬಗಲಿ ಬಂಡಾಯ
ಬಂಡಾಯ ಬಾವುಟ ಹಾರಿಸಿದ್ದ ಇಂಡಿಯ ಬಿಜೆಪಿ ಶಾಸಕ ಡಾ.ಸಾರ್ವಭೌಮ ಬಗಲಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ನಾಗಠಾಣ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ವಿಲಾಸಬಾಬು ಆಲಮೇಲಕರ  ನಾಮಪತ್ರ ವಾಪಸ್ಸು ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಾಜಿ ಶಾಸಕ ಮನೋಹರ ಐನಾಪುರ ಅವರ ಪತ್ನಿ ವಸುಂಧರಾ ಐನಾಪುರ ಪಕ್ಷೇತರರಾಗಿ ವಿಜಾಪುರ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಬಹು ದಿನಗಳ ಹಿಂದೆಯೇ ಆಲಮೇಲಕರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅವರು ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ನಾಮಪತ್ರ ವಾಪಸ್ಸು ಪಡೆಯುವ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನುತ್ತಿದ್ದಾರೆ ಕೆಲವರು.

`ವೈಯಕ್ತಿಕ ಕಾರಣಗಳಿಂದಾಗಿ ನಾನು ನಾಮಪತ್ರ ವಾಪಸ್ಸು ಪಡೆದಿದ್ದೇನೆ. ಪಕ್ಷ ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

`ಇಂಡಿ ಕ್ಷೇತ್ರದಲ್ಲಿ ಗಾಣಿಗ ಸಮಾಜದವರಿಗೆ ಟಿಕೆಟ್ ನೀಡಬೇಕು' ಎಂದು ಪಟ್ಟು ಹಿಡಿದಿದ್ದ ಹಾಗೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬಾಬುರಾವ ಮೇತ್ರಿ ಏಕಾಏಕಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ.

ಪಕ್ಷೇತರರು ಅಧಿಕ
ಒಟ್ಟು ಎಂಟು ಕ್ಷೇತ್ರಗಳ 116 ಜನ ಅಭ್ಯರ್ಥಿಗಳಲ್ಲಿ ಪಕ್ಷೇತರರೇ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಿರ್ಮಲಾ ಶ್ರೀನಿವಾಸ ಅರಕೇರಿ ಎಂಬವರು ಈ ಬಾರಿ ವಿಜಾಪುರ ನಗರ ಹಾಗೂ ನಾಗಠಾಣ ಎರಡೂ ಕ್ಷೇತ್ರಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಪತಿ ಸಹ ನಾಮಪತ್ರ ಸಲ್ಲಿಸಿದ್ದರು.

ವಿಜಾಪುರ ನಗರ, ಬಬಲೇಶ್ವರ ಮತ್ತು ನಾಗಠಾಣ ಮೀಸಲು ಕ್ಷೇತ್ರದಲ್ಲಿ ತಲಾ 16 ಅಭ್ಯರ್ಥಿಗಳು, ಸಿಂದಗಿ ಮತ್ತು ಇಂಡಿ ಕ್ಷೇತ್ರಗಳಲ್ಲಿ ತಲಾ 15 ಅಭ್ಯರ್ಥಿಗಳು, ಬಸವನ ಬಾಗೇವಾಡಿ ಮತ್ತು ದೇವರ ಹಿಪ್ಪರಗಿ ಕ್ಷೇತ್ರಗಳಲ್ಲಿ ತಲಾ 13 ಹಾಗೂ ಮುದ್ದೇಬಿಹಾಳ ಕ್ಷೇತ್ರದಲ್ಲಿ 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.