ಕೊಲ್ಹಾರ: ಕಳೆದ ಕೆಲ ವರ್ಷಗಳಂತೆ ಈ ಬಾರಿಯೂ ಮುಂಗಾರು ಮಳೆ ಈ ಭಾಗದಲ್ಲಿ ಸರಿಯಾಗಿ ಆಗದೇ ಇರುವುದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ. ರೋಹಿಣಿ ಮಳೆ ಕೆಲ ದಿನಗಳ ಹಿಂದೆ ಸುರಿದು ರೈತರಲ್ಲಿ ಸಂತಸದ ವಾತಾವರಣ ಮೂಡಿಸಿತ್ತಾದರೂ ಬಿತ್ತನೆಗೆ ಬೇಕಾಗುವಷ್ಟು ಭೂಮಿ ಹಸಿಯಾಗದೇ ಇರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
ಮಳೆಗಾಲಕ್ಕೆ ಮುನ್ನುಡಿ ಬರೆಯುವ ಮೃಗಶಿರಾ ಮಳೆ ಈಗ ಅರ್ಧಗಳೆದಿದೆ. ಈ ಪ್ರದೇಶದಲ್ಲಿ ಈಗ ಸದಾ ಮೋಡ ಮುಸುಕಿದ ವಾತಾವರಣ ಇದೆಯಾದರೂ ಬಿರುಸಾಗಿ ಬೀಸುವ ಬಿರುಗಾಳಿಯಿಂದಾಗಿ ಮೋಡಗಳು ಮಳೆ ಸುರಿಸದೇ ಓಡುತ್ತಿವೆ. ಬಿತ್ತಲು ಬೀಜ, ಗೊಬ್ಬರ ಹಾಗೂ ಹೊಲವನ್ನು ಉಳುಮೆ ಮಾಡಿ ಸಜ್ಜಾಗಿರಿಸಿದ್ದರೂ ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಈ ಭಾಗದ ರೈತರು ಯಾವಾಗ ಮಳೆ ಬರುವುದೋ ಎಂದು ಆಕಾಶವನ್ನು ನೋಡುತ್ತಾ,ಬೀಸುವ ಬಿರುಗಾಳಿಗೆ ಶಾಪ ಹಾಕುತ್ತಿದ್ದಾರೆ.
`ಕಳದ ಒಂದ ವಾರದಿಂದ ಬರೀ ಬಿರುಗಾಳಿ ಬೀಸಾಕತ್ತೈತ್ತರೀ, ಹೊಲದಾಗ ಹರಗು ಮುಂದ ಕಣ್ಣಾಗ ಮಣ್ಣ ಬೀಳುವಷ್ಟು ಜೋರಾಗೈತ್ರೀ. ಆಶಾಡ ಗಾಳಿ ಈಗ ಸುರು ಆಗೈತಿ ಅನಸಾಕತ್ತೈತ್ರೀ. ಈ ಗಾಳಿ ಹೀಂಗ್ಯ ಬೀಸಿದರ‌್ಯ ಮಳೆ ಯ್ಯೊಂಗ ಬರ‌್ತೈತ್ರಿ' ಎಂದು ಸನ್ನಿವೇಶವನ್ನು ಚಿಕ್ಕಗರಸಂಗಿ ರೈತ ಗದಿಗೆಪ್ಪ ಪಾಟೀಲ ವಿವರಿಸುವರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದವು. ಊಳುವುದು, ಹರಗುವುದು, ನೆಲ ಸಮ ಮಾಡುವುದು ಸೇರಿದಂತೆ ಮೊದಲಾದ ಕಾರ್ಯಗಳಲ್ಲಿ ರೈತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭೂಮಿಗೆ ಸರಿಯಾಗಿ ಮಳೆಯಾಗದಿದ್ದರೂ ಮಳೆರಾಜನ ಮೇಲೆ ನಂಬಿಗೆಯಿಟ್ಟು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
`ಸರ‌್ಯಾಗಿ ಮಳಿ ಬಂದಿದ್ರ ವಾರದಿಂದಾ ನಾ ಹೊಲಕ ಹೆಸರ ಬಿತ್ತಾವ್ನರೀ,ಆದ್ರ ಏನ ಮಾಡೂದು,ಮಿರಗಾ (ಮೃಗಶಿರಾ) ಮಳಿ ಕೈಕೊಡಂಗ ಕಾಣಸಾಕತ್ತೈತ್ರೀ,ಹಿಂಗಾಗಿ ನನ್ನ ಹೊಲಾ ಇನ್ನು ಬೀಜಾ ಕಂಡಿಲ್ರೀ' ಎಂದು ರೋಣಿಹಾಳ ಗ್ರಾಮದ ರೈತ ನಾರಾಯಣ ಕುಲಕರ್ಣಿ ನೋವು ತೋಡಿಕೊಳ್ಳುವರು.
ಮುಂಗಾರು ಮಳೆಗೆ ಅಲ್ಪಾವಧಿ ಬೆಳೆಯಾಗಿ ಪರಿಗಣಿಸಿ ಸಪ್ಟಂಬರ್ ಒಳಗಡೆ ಎಲ್ಲ ಬೆಳೆಗಳನ್ನು ಪಡೆಯುವ ಬಗೆಯಲ್ಲಿ ಬೀಜ ಬಿತ್ತನೆ ಮಾಡಲಾಗುತ್ತದೆ. ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ, ತೊಗರಿ ಬೆಳೆ ಬೆಳೇಯುತ್ತಾರೆ. ಕಾಲುವೆ ನೀರಿನಿಂದ ಕೆಲವು ರೈತರು ಕಬ್ಬನ್ನು ಬೆಳೆಯುತ್ತಾರೆ. ಆದರೂ ಮಳೆ ಬಾರದಿದ್ದರೆ ಅದೂ ಚೆನ್ನಾಗಿ ಬೆಳೆಯದು. ಹಾಗಾಗಿ ವರುಣದೇವ ಸಕಾಲಕ್ಕೆ ಮಳೆ ಸುರಿದು ರೈತರ ಬವಣೆಯನ್ನು ನೀಗಿಸಿಯಾನೇ ಕಾದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.