ADVERTISEMENT

ಸೇವೆ ಮುಂದುವರಿಕೆಗೆ ವಿಶೇಷ ಕಾನೂನು: ಆಗ್ರಹ

ನೀರಾವರಿ ಇಲಾಖೆಯ 417 ಎಂಜಿನಿಯರರ ನೇಮಕಾತಿ ಅಸಿಂಧು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:57 IST
Last Updated 26 ಸೆಪ್ಟೆಂಬರ್ 2013, 6:57 IST

ವಿಜಾಪುರ: ‘ಕೃಷ್ಣಾ ಕಣಿವೆ ಪ್ರದೇಶದ ನೀರಾವರಿ ಯೋಜ­ನೆ­ಗ­ಳಲ್ಲಿ ಕಾರ್ಯನಿರ್ವಹಿಸುತ್ತಿರುವ 417 ಜನ ಎಂಜಿನಿಯರರ ನೇಮ­ಕಾತಿಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದೆ. ರಾಜ್ಯ ಸರ್ಕಾರ ವಿಶೇಷ ಕಾನೂನು ರೂಪಿಸಿ ಅವರನ್ನು ಸೇವೆ­ಯಲ್ಲಿ ಮುಂದುವರೆಸಬೇಕು’ ಎಂದು ಹೈದರಾಬಾದ್‌ ಕರ್ನಾ­ಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

‘ಡಿಸೆಂಬರ್‌ 2013ರ ಅಂತ್ಯಕ್ಕೆ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅಷ್ಟರೊಳಗೆ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು. ಸರ್ಕಾ­­­ರದ ಮೇಲೆ ಒತ್ತಡ ತರಲು ಬೆಂಗಳೂರಿ­ನಲ್ಲಿ ಧರಣಿ ನಡೆ­ಸ­ಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಳೆ ಮೈಸೂರು ಭಾಗದ ಎಂಜಿನಿಯರರು ಕೃಷ್ಣಾ ಕಣಿವೆ ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರ­ಲಿಲ್ಲ. ಹೀಗಾಗಿ ಈ ಭಾಗದ ಎಂಜಿನಿಯರರನ್ನೇ ನೇಮಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದೆವು. ಸರ್ಕಾರ 1993–94ರಲ್ಲಿ ಈ ಭಾಗದ 440 ಜನ ಎಂಜಿನಿಯರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿತ್ತು. 2002ರಲ್ಲಿ ಅವರ ಸೇವೆಯನ್ನು ಕಾಯಂ ಮಾಡಿತ್ತು. ಅವರಲ್ಲಿ 67 ಜನರಿಗೆ ಬಡ್ತಿಯನ್ನೂ ನೀಡಿದೆ’ ಎಂದರು.

‘ಈ ನೇಮಕಾತಿ ವಿರೋಧಿಸಿ ಹಳೆ ಮೈಸೂರು ಭಾಗದವರು ಕೋರ್ಟ್‌ ಮೊರೆ ಹೋಗಿದ್ದರು. ನೇಮಕಾತಿ ರಾಜ್ಯ ಮಟ್ಟದಲ್ಲಿ ನಡೆಯಬೇಕು. ಪ್ರಾದೇಶಿಕ ಮಟ್ಟದಲ್ಲಿ ನಡೆದ ಈ ನೇಮಕಾತಿ ಅಸಿಂಧು ಎಂದು ಹೈಕೋರ್ಟ್‌ ನೀಡಿದ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಹೀಗಾಗಿ ಇವರೆಲ್ಲ ಅತಂತ್ರರಾಗಿದ್ದಾರೆ’ ಎಂದು ಹೇಳಿದರು.

‘440 ಜನರಲ್ಲಿ 23 ಜನ ಮರಣ ಹೊಂದಿ­ದ್ದಾರೆ. ಅವರ ಕುಟುಂಬದವರಿಗೆ ಅನು­ಕಂ­ಪದ ಆಧಾರದ ಮೇಲೆ ನೌಕರಿ ನೀಡ­ಬೇಕು ಮತ್ತು ಉಳಿದವರ ಸೇವೆ ಮುಂದುವ­ರೆ­ಸಲು ವಿಶೇ­ಷ ಕಾನೂನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಮಾಜಿ ಮುಖ್ಯ­ಮಂತ್ರಿ ಧರಂಸಿಂಗ್‌ ನೇತೃತ್ವದಲ್ಲಿ ಮುಂದಿನ ತಿಂಗಳು  ಬೆಂಗಳೂರಿಗೆ ನಿಯೋಗ ಕರೆ­ದೊಯ್ಯಲಿದ್ದೇವೆ’ ಎಂದರು. ಮನೀಷ್‌ ಜಾಜು, ವಕ್ತಾರ ನಾಗಲಿಂ­ಗ­ಯ್ಯ ಮಠಪತಿ, ಕಿರಣ ಮಸೂತಿ, ಸಿ.ಎಂ. ಕೊಪ್ಪದ, ಒಡೆಯರ ಪತ್ರಿಕಾಗೋಷ್ಠಿ­ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.