ADVERTISEMENT

ಹಿಂಗಾರು ಬಿತ್ತನೆ ಚುರುಕು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 5:00 IST
Last Updated 14 ಅಕ್ಟೋಬರ್ 2012, 5:00 IST

ಬಸವನಬಾಗೇವಾಡಿ: ಕಳೆದ ವಾರ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಳೆಯಾಗಿದ್ದರಿಂದ ರೈತರಲ್ಲಿ ಸಂತಸ ಮೂಡಿದ್ದು, ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಬೀಜ ಗೊಬ್ಬರ ಖರೀದಿ, ಬಿತ್ತನೆ ಕೆಲಸ ಭರದಿಂದ ಸಾಗಿದೆ.

ವಾಡಿಕೆಯಂತೆ ಅಕ್ಟೋಬರ್ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಮಳೆ ಪ್ರಮಾಣ 622 ಮಿ.ಮೀ ಇದೆ. ಆದರೆ ಅ. 8ರ ವರೆಗೆ ತಾಲ್ಲೂಕಿನಲ್ಲಿ 343.20 ಮಿ.ಮೀ. ಮಳೆ ಆಗಿದೆ. ಬಸವನಬಾಗೇವಾಡಿಯಲ್ಲಿ (297 ಮಿ.ಮೀ), ಮನಗೂಳಿಯಲ್ಲಿ (176 ಮಿ.ಮೀ), ಆಲಮಟ್ಟಿಯಲ್ಲಿ (354.6 ಮಿ.ಮೀ), ಮಟ್ಟಿಹಾಳ (224.4 ಮಿ.ಮೀ), ಆರೇಶಂಕರ (537.8 ಮಿ.ಮೀ), ಹೂವಿನಹಿಪ್ಪರಗಿ (469.5 ಮಿ.ಮೀ) ನಷ್ಟು ಮಳೆ ಪ್ರಮಾಣ ದಾಖಲಾಗಿದೆ. ಇದುವರೆಗಿನ ಮಳೆಯಿಂದಾಗಿ ಹಿಂಗಾರು ಬೆಳೆಗಳಾದ ಸಜ್ಜೆ, ತೊಗರಿ ಸೇರಿದಂತೆ ಇತರ ಬೆಳೆಗಳು ಚೇತರಿಸಿಕೊಳ್ಳುತ್ತಿವೆ.

 ಇನ್ನೂ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವ ರೈತರು ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಶೇ.50 ರಷ್ಟು ಬಿತ್ತನೆ ಕಾರ್ಯ ಮುಗಿದಿದ್ದು. ಹಿಂಗಾರಿ ಜೋಳ(12000 ಹೆಕ್ಟೇರ್), ಕಡಲೆ (15000 ಹೆ.), ಸೂರ್ಯಕಾಂತಿ (6000 ಹೆ.) ಬಿತ್ತನೆಯಾಗಿದೆ. ಬಿತ್ತನೆ ಇನ್ನೂ ಮುಂದುವರಿದಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ರಕ್ಕಸಗಿ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿ ನಲ್ಲಿ ಇದುವರೆಗೆ ತಾಲ್ಲೂಕಿನಲ್ಲಿ ರಿಯಾ ಯಿತಿ ದರದಲ್ಲಿ ಬಿತ್ತನೆ ಬೀಜಗಳಾದ ಹಿಂಗಾರು ಜೋಳ (250 ಕ್ವಿಂ), ಕಡಲೆ (2000 ಕ್ವಿಂ), ಸೂರ್ಯಕಾಂತಿ (50 ಕ್ವಿಂ.) ವಿತರಣೆಯಾಗಿದೆ. ಬಿತ್ತನೆ ಬೀಜದ ವಿತರಣೆ ಮುಂದುವರಿದಿದೆ ಎಂದು ಕೃಷಿ ನಿರ್ದೇಶಕರು ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.