ADVERTISEMENT

ಹಿರಿಯರಿಗೆ ಮಾದರಿ ಈ ಮಕ್ಕಳ ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:20 IST
Last Updated 15 ಸೆಪ್ಟೆಂಬರ್ 2011, 6:20 IST

ಸಿಂದಗಿ: ಅಚ್ಚುಕಟ್ಟಾದ, ನಿಯಮಾವಳಿಗಳ ಚೌಕಟ್ಟಿನಲ್ಲಿ ಪಾರದರ್ಶಕತೆಯಿಂದ ಕೂಡಿದ ಚುನಾವಣೆಯೊಂದು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಾಲಾ ಮಕ್ಕಳಿಂದ ಇತ್ತೀಚೆಗೆ ನಡೆಯಿತು.
ಶಾಲಾ ಸಂಸತ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ತದ್ರೂಪದಂತೆ ನಡೆಸಲಾಯಿತು. ನಾಮಪತ್ರ ಸಲ್ಲಿಸುವುದು, ಹಿಂದಕ್ಕೆ ಪಡೆಯುವುದು, ಪ್ರಚಾರ ಕಾರ್ಯ, ಪ್ರಚಾರ ಕಾರ್ಯ ಮುಕ್ತಾಯಗೊಳ್ಳುವ ಪ್ರಕ್ರಿಯೆ, ನಂತರ ಚುನಾವಣೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಅವರ ಚಿನ್ಹೆಯನ್ನೊಳಗೊಂಡು ಮತಪತ್ರ ಮುದ್ರಿಸಲಾಗಿತ್ತು. ಮತಗಟ್ಟೆ ಸಿದ್ಧತೆ ಮಾಡಲಾಗಿತ್ತು. ಒಳಗಡೆ ಗುಪ್ತ ಮತದಾನ ಮಾಡುವ ವ್ಯವಸ್ಥೆ, ಮತಪೆಟ್ಟಿಗೆಯಲ್ಲಿ ಅಷ್ಟೇ ನಿರ್ಭೀತಿಯಿಂದ ಮತ ಚಲಾಯಿಸಲು ಗಾಂಭೀರ್ಯತೆಯಿಂದ ಮಕ್ಕಳು ಕಾತುರರಾಗಿ ಸಾಲಾಗಿ ನಿಂತುಕೊಂಡಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಎಸ್.ಕೆ. ಗುಗ್ಗರಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಮಾತನಾಡಿ, ಮಕ್ಕಳಲ್ಲಿ ಪ್ರಜಾಪ್ರಭುತ್ವ ಪರಿಕಲ್ಪನೆ ಹಾಗೂ ಸಾರ್ವತ್ರಿಕ ಚುನಾವಣೆಯ ಪರಿಜ್ಞಾನ ನೀಡಿ ಅವರಲ್ಲಿ ನಾಯಕತ್ವದ ಗುಣ ಬೆಳೆಸುವ ಸದುದ್ದೇಶದಿಂದ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು ಎಂದು ತಿಳಿಸಿದರು

ಚುನಾವಣಾ ಸಿಬ್ಬಂದಿಯಾಗಿ ಎಸ್.ಎ. ಬಿರಾದಾರ, ಆಫ್ರೀನ್ ಜಮಾದಾರ, ಎಚ್.ಎ. ಕಂದಗಲ್, ಎಂ.ಎಸ್. ಹಚಡದ, ಆರ್.ಎಲ್. ಬಡಗಿ ಕಾರ್ಯ ನಿರ್ವಹಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಎಂ.ಬಿ. ಬಗಲಿ ಚುನಾವಣಾ ವೀಕ್ಷಕರಾಗಿದ್ದರು.

ಬಿ.ಎಂ. ಜಹಾಗೀರದಾರ, ಶ್ರೀದೇವಿ ಶಿವಶರಣ, ಮುತ್ತು ಸರ್, ಟಿ.ಎಂ. ತುಬಾಕೆ ಮತ ಎಣಿಕೆ ಅಧಿಕಾರಿಗಳಾಗಿದ್ದರು.

ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಿಂದಗಿ ತಾಲ್ಲೂಕಿನ ಗಣಿಹಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ವಿವಿಧ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ಶರಣಬಸು ಗಾಡದ (ಎತ್ತರ ಜಿಗಿತ), ಜಯಶ್ರೀ ಸುಣಗಾರ (100ಮೀ ಓಟ), ಶ್ರುತಿ ಆಂದೋಡಗಿ (400 ಮೀ ಓಟ), ದೇವಕ್ಕಿ ಆನಗೊಂಡ, ಸುನಂದಾ ಚೌಧರಿ, ಶ್ವೇತಾ ಓಲೇಕಾರ (100 ಮೀ. ಓಟ, ರಿಲೇ) ಅವರು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಡಾ. ಗಿರೀಶ ರೋಟರಿ ಅಧ್ಯಕ್ಷಪಟ್ಟಣದ ರೋಟರಿ ಕ್ಲಬ್ ಕಲ್ಯಾಣನಗರದ ನೂತನ ಅಧ್ಯಕ್ಷರಾಗಿ ಡಾ.ಗಿರೀಶ ಕುಲಕರ್ಣಿ ಹಾಗೂ ಕಾರ್ಯದರ್ಶಿಯಾಗಿ ಪ್ರೊ.ಎ.ಆರ್.ಹೆಗ್ಗನದೊಡ್ಡಿ ಆಯ್ಕೆಯಾಗಿದ್ದಾರೆ.

2011-12ನೇ ಸಾಲಿಗಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಶ್ರೀನಿವಾಸ ಸೋಮಯಾಜಿ ಹಾಗೂ ಕಾರ್ಯದರ್ಶಿ ಉದಯ ಪುತ್ರನ್ ಅವರು ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟ ಹಿನ್ನಲೆಯಲ್ಲಿ ಡಾ.ಗಿರೀಶ ಮತ್ತು ಪ್ರೊ.ಹೆಗ್ಗನದೊಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಲಬ್ ಚಾರ್ಟರ್ ಅಧ್ಯಕ್ಷ ಡಾ.ಸಿ.ಸಿ.ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.