ADVERTISEMENT

ಹೊಸ ಶಾಲಾ–ಕಾಲೇಜು ಮಂಜೂರು: ರತ್ನಾಕರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:16 IST
Last Updated 24 ಸೆಪ್ಟೆಂಬರ್ 2013, 5:16 IST
ವಿಜಾಪುರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕೆ.ರತ್ನಾಕರ ಅವರನ್ನು ಶಾಸಕ ಡಾ.ಮಕ್ಬೂಲ್‌ ಬಾಗವಾನ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸನ್ಮಾನಿಸಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಚಿತ್ರದಲ್ಲಿದ್ದಾರೆ.
ವಿಜಾಪುರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕೆ.ರತ್ನಾಕರ ಅವರನ್ನು ಶಾಸಕ ಡಾ.ಮಕ್ಬೂಲ್‌ ಬಾಗವಾನ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸನ್ಮಾನಿಸಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಚಿತ್ರದಲ್ಲಿದ್ದಾರೆ.   

ವಿಜಾಪುರ: ಮಕ್ಕಳ ಅನುಪಾತಕ್ಕೆ ಅನುಸಾರವಾಗಿ ಜಿಲ್ಲೆಗೆ ಅಗತ್ಯವಿರುವ ಹೊಸ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಗಳನ್ನು ಮಂಜೂರು ಮಾಡುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಸೋಮವಾರ ಇಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಕ್ಷಣ ಜಿಲ್ಲೆಯ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳ ಸಂಖ್ಯೆ, ಮಕ್ಕಳ ಅನುಪಾತ ಕುರಿತಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ತಾಲ್ಲೂಕು ಕೇಂದ್ರಗಳಲ್ಲೇ ಸರ್ಕಾರಿ ಪಿಯು ಕಾಲೇಜುಗಳಿಲ್ಲ. ವಿಜ್ಞಾನ ವಿಭಾಗವಂತೂ ಇಲ್ಲವೇ ಇಲ್ಲ. ವಿಜ್ಞಾನ ವಿಷಯವುಳ್ಳ ಪಿಯು ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ಪ್ರಯೋಗಾಲದ ಕೊರತೆಯಿಂದ ಮಕ್ಕಳನ್ನು ದೂರದ ಮಂಗಳೂರು ಹಾಗೂ ಖಾಸಗಿ ಕಾಲೇಜುಗಳಿಗೆ ಸೇರಿಸುವ ಪರಿಸ್ಥಿತಿ ಉಂಟಾಗಿದೆ’ ಎಂದು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ‘ಇಡೀ ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಇದೆ. ಅನುಪಾತಕ್ಕನುಸಾರವಾಗಿ ಆದ್ಯತೆಯ ಮೇರೆಗೆ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ಮಾಡಬೇಕು’ ಎಂದರು.

ಇಂಡಿ ತಾಲ್ಲೂಕಿನ ಬಿಸಿಯೂಟ ಪೂರೈಕೆಯಲ್ಲಿ ಅವ್ಯವಹಾರ ಎಸಗಿರುವ ಸಹಾಯಕ ನಿರ್ದೇಶಕ ಬಜಂತ್ರಿ ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ತಕ್ಷಣವೇ ಅಮಾನತಗೊಳಿಸಲು ಶಿಕ್ಷಣ ಸಚಿವರು ಆದೇಶಿಸಿದರು. ಜಿಲ್ಲೆಯಾದ್ಯಂತ ಬಿಸಿಯೂಟ ಪೂರೈಕೆ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಶಾಲೆಗಳ ನವೀಕರಣ, ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವುದಾಗಿ ಸಚಿವರು ಭರವಸೆ ನೀಡಿದರು. ರಾಜ್ಯದಲ್ಲಿ 53,000 ಶಾಲಾ ಕಟ್ಟಡಗಳನ್ನು ದುರಸ್ತಿ ಹಾಗೂ ನವೀಕರಣಗೊಳಿಸಬೇಕಾಗಿದೆ. ಇದಕ್ಕಾಗಿ ರೂ. 6,000 ಕೋಟಿ ಅಗತ್ಯವಿದ್ದು, ಸಾರ್ವಜನಿಕ ಸಹಭಾಗಿತ್ವದಲ್ಲಿ ಶಾಲಾ-ಕಾಲೇಜು ಕಟ್ಟಡ ದುರಸ್ತಿ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಹೇಳಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವಂತೆ ಸಲಹೆ ನೀಡಿದರು. ಶಾಸಕ ಡಾ. ಮಕ್ಬೂಲ್‌ ಬಾಗವಾನ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಶಿವಾನಂದ ಕೌಜಲಗಿ, ಜಿಲ್ಲಾ ಪಂಚಾಯಿತಿ  ಅಧ್ಯಕ್ಷೆ ಕಾವ್ಯ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ,  ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.