ADVERTISEMENT

ಹೋರಾಟಕ್ಕೆ ಬಲ ಕೊಡಿ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 11:09 IST
Last Updated 1 ಏಪ್ರಿಲ್ 2013, 11:09 IST

ವಿಜಾಪುರ: `ಜಿಲ್ಲೆಯ ಸಮಗ್ರ ನೀರಾವರಿ ಹಾಗೂ ಸಂವಿಧಾನದ 370ನೇ ಕಲಂ ಅಡಿ ವಿಶೇಷ ಸ್ಥಾನಮಾನ ಪಡೆದುಕೊಳ್ಳಲು ನನ್ನ ಹೋರಾಟ ನಿರಂತರವಾಗಿರುತ್ತದೆ. ಈ ಚುನಾವಣೆಯಲ್ಲಿ ಪುನರಾಯ್ಕೆ ಮಾಡುವ ಮೂಲಕ ಈ ಹೋರಾಟಕ್ಕೆ ಬಲ ತಂದುಕೊಡಬೇಕು' ಎಂದು ಬಬಲೇಶ್ವರ ಶಾಸಕ, ಎ.ಐ.ಸಿ.ಸಿ ಸದಸ್ಯ ಎಂ.ಬಿ. ಪಾಟೀಲ ವಿನಂತಿಸಿದರು.

ತೊರವಿಯಲ್ಲಿ ಭಾನುವಾರ ಜರುಗಿದ ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಜಾತ್ಯತೀತ, ಅಭಿವೃದ್ಧಿ ಪರವಾದ ಸ್ಥಿರ ಸರ್ಕಾರಕ್ಕಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೋರಿದರು. `ರಾಜ್ಯದ 10 ಮಾದರಿ ಕ್ಷೇತ್ರಗಳಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಸೇರ್ಪಡೆ ಮಾಡುವುದು ನನ್ನ ಗುರಿ. ಭವಿಷ್ಯದ ಪೀಳಿಗೆಗೆ ನಾವು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕಿದೆ.

ಕೆರೆ ನೀರು ತುಂಬುವ, ಬಬಲೇಶ್ವರ ಮತ್ತು ಮುಳವಾಡ ಏತ ನೀರಾವರಿ ಯೋಜನೆಗಳಿಂದ ಬಬಲೇಶ್ವರ ಕ್ಷೇತ್ರ ಸಂಪೂರ್ಣ ನೀರಾವರಿ ಮಾಡುವ ನನ್ನ ಪ್ರಯತ್ನಕ್ಕೆ ತಾವು ಮತ ನೀಡುವ ಮೂಲಕ ಆಶೀರ್ವದಿಸಬೇಕು' ಎಂದರು. ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಯುವ ಶಕ್ತಿ ಹಾಗೂ ಸ್ತ್ರೀ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇಂಟರ್‌ನೆಟ್ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಹಲವಾರು ಪ್ರಮುಖ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಮುಂದಿನ ದಿನಗಳಲ್ಲಿ ಇನ್ನು ಕೆಲವು ಪ್ರಮುಖರು ಪಕ್ಷ ಸೇರಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದರು. 

ಪಕ್ಷ ಸೇರ್ಪಡೆ: ಬಿಜೆಪಿ ಹಿರಿಯ ಮುಖಂಡ, ವಕೀಲ ಕೆ.ಎಸ್. ಮೆಂಡೆಗಾರ, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಶ್ರಿಶೈಲ ತುಳಜನ್ನವರ (ತಿಕೋಟಾ), ಯಾಕೂಬ್ ಜತ್ತಿ (ಗೊಣಸಗಿ), ಶ್ರಿಮಂತ ಬಿರಾದಾರ (ಕಳ್ಳಕವಟಗಿ), ಶಿವಪ್ಪ ಪೂಜಾರಿ (ತಿಕೋಟಾ), ಸಿದ್ದಣ್ಣ ದೇಸಾಯಿ (ಜೈನಾಪುರ), ರಾಜುಗೌಡ ಪಾಟೀಲ (ಜಂಬಗಿ), ರಾಜುಗೌಡ ಪಾಟೀಲ (ಕಣಬೂರ) ಇತರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು. `10 ವರ್ಷಗಳ ಕಾಲ ಹಳ್ಳಿ ಹಳ್ಳಿ ತಿರುಗಿ ಜೆಡಿಎಸ್ ಕಟ್ಟಿದ್ದೇವು. ಎಂ.ಬಿ. ಪಾಟೀಲರ ಕ್ರೀಯಾಶೀಲ ಹಾಗೂ ಸಜ್ಜನ ವ್ಯಕ್ತಿತ್ವಕ್ಕೆ ಬೆಲೆ ನೀಡಿ ಈ ಪಕ್ಷವನ್ನು ಸೇರಿದ್ದೇವೆ' ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಕೆ.ಎಸ್. ಮೆಂಡೆಗಾರ, `ನೀರಾವರಿ ಕುರಿತು ಎಂ.ಬಿ. ಪಾಟೀಲರಿಗೆ ಇರುವ ಕಳಕಳಿಯ ಕಾರಣದಿಂದಾಗಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದು, ಅವರ ಆಯ್ಕೆ ನಿಶ್ಚಿತ. ಮುಂದಿನ ಸರ್ಕಾರದಲ್ಲಿ ಮಂತ್ರಿಗಳಾಗಿ ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸುವ ಕೆಲಸವನ್ನು ಅವರು ಮಾಡಲಿ' ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಸುಭಾಸಗೌಡ ಪಾಟೀಲ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷರಾದ ಬಸವರಾಜ ದೇಸಾಯಿ, ಸೋಮನಾಥ ಬಾಗಲಕೋಟ, ಸದಸ್ಯರಾದ ಉಮೇಶ ಕೋಳಕೂರ, ರತ್ನಾಬಾಯಿ ಚಿನಗುಂಡಿ, ಜ್ಯೋತಿ ದೇಸಾಯಿ, ಬಾಪುಗೌಡ ಪಾಟೀಲ, ಮುಖಂಡರಾದ ಎನ್.ಎಸ್.ಅಳ್ಳೊಳ್ಳಿ, ಶ್ರಿಶೈಲಗೌಡ ಪಾಟೀಲ, ಜಕ್ಕಪ್ಪ ಯಡವೆ, ಚನ್ನಪ್ಪ ದಳವಾಯಿ, ಸದಾಶಿವ ಗುದಿಗೆಣ್ಣವರ, ಸೋಮನಾಥ ಕಳ್ಳಿಮನಿ, ಸಿದ್ದು ಗೌಡನವರ ಇತರರು ವೇದಿಕೆಯಲ್ಲಿದ್ದರು.

ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಮ್ಮಣ್ಣ ಹಂಗರಗಿ ಸ್ವಾಗತಿಸಿದರು. ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾಂತೇಶ ಬಿರಾದಾರ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.