ವಿಜಾಪುರ: ‘ದೃಶ್ಯ ಮಾಧ್ಯಮವು ಕೃತಕ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ. ಮಹಿಳೆಯರ ದುಃಖ–ದುಮ್ಮಾನ, ಸೌಂದರ್ಯವೇ ಟಿವಿ ಧಾರಾವಾಹಿಗಳ ಬಂಡವಾಳ ಆಗಿದೆಯೇ ವಿನಾ ಮಾನವೀಯ ಸಂಬಂಧ–ಭಾವನೆಗಳನ್ನು ಬಿತ್ತರಿಸುವ ಕೆಲಸ ಆಗತ್ತಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎನ್. ಉಷಾರಾಣಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಮಹಿಳಾ ಸಮಾಖ್ಯಾ ಜಿಲ್ಲಾ ಘಟಕದಿಂದ ‘ಟಿವಿ ಧಾರಾವಾಹಿಗಳಲ್ಲಿ ಮಹಿಳೆಯರ ಚಿತ್ರಣ’ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣದಿಂದ ಬದುಕಿನ ಶೈಲಿ ಬದಲಾಗಿದೆ. ಆಧುನಿಕ ತಂತ್ರಜ್ಞಾನ ಖಾಸಗಿ ಬದುಕನ್ನು ಸಾರ್ವಜನಿಕಗೊಳಿಸಿದ್ದು, ಇವತ್ತು ಖಾಸಗಿ ಬದುಕು ಹಾಗೂ ಸಾರ್ವಜನಿಕ ಬದುಕಿನ ಮಧ್ಯದ ವ್ಯತ್ಯಾಸಗಳೇ ಇಲ್ಲದಂತಾಗಿದೆ. ಮನೆಯ ಒಳಗಿನ ಸಂಗತಿಗಳು ಜಗಜ್ಜಾಹೀರಾತಾಗುತ್ತಿವೆ’ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಮೀನಾ ಚಂದಾವರಕರ, ‘ದೂರದರ್ಶನ ಆರಂಭದ ವರ್ಷಗಳಲ್ಲಿ ಪ್ರಸಾರ ಮಾಡಿದ ಕೆಲವು ಧಾರಾವಾಹಿಗಳು ಮಹಿಳೆಯರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುತ್ತಿದ್ದವು. ಈಗ ಅಂತಹ ಧಾರಾವಾಹಿಗಳ ಅವಶ್ಯಕತೆ ಇದೆ. ಮಾಧ್ಯಮಗಳು ಮಹಿಳೆಯರನ್ನು ನಕಾರಾತ್ಮಕವಾಗಿ ಚಿತ್ರಿಸದೇ ಸಕಾರಾತ್ಮಕವಾಗಿ ಚಿತ್ರಿಸಬೇಕು. ಹಿರಿಯರನ್ನು ಗೌರವಿಸುವಂತಹ ಮೌಲ್ಯಗಳನ್ನು ಬಿತ್ತರಿಸುವ ಧಾರಾವಾಹಿಗಳು ಮೂಡಿ ಬರುವಂತಾಗಬೇಕು’ ಎಂದು ಹೇಳಿದರು.
ಮಹಿಳಾ ಸಮಾಖ್ಯಾದ ಜಿಲ್ಲಾ ಸಂಯೋಜಕಿ ಸಂತಾನಿ ದಂಡಿನ ಮಾತನಾಡಿದರು. ಟಿ.ಪಿ.ಗೀತಾ ಸ್ವಾಗತಿಸಿದರು. ಮಮತಾ ಕೆ.ಎನ್. ಮತ್ತು ಸುನೀಲ್‌ಕುಮಾರ ಸುಧಾಕರ ಪರಿಚಯಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಲ್ಲವಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿಶಾಲಾಕ್ಷಿ ಹಿರೇಮಠ ವಂದಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಮಣಿಪಾಲ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಂದಿನಿ ಲಕ್ಷ್ಮಿಕಾಂತ, ‘ಧಾರಾವಾಹಿಗಳಲ್ಲಿ ಮೂಡಿ ಬರುವ ಪಾತ್ರಗಳೊಂದಿಗೆ ನಾವು ಊಹಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುತ್ತಿದ್ದೇವೆ. ಸುಂದರವಾದ ಬದುಕನ್ನು ಧಾರಾವಾಹಿಗಳು ಬದಲಾಯಿಸುತ್ತಿವೆ’ ಎಂದರು.
ಸುಧಾ ವಾರಪತ್ರಿಕೆಯ ಹಿರಿಯ ಉಪಸಂಪಾದಕ ದಿಲಾವರ ರಾಮದುರ್ಗ, ‘ಟಿವಿ ಧಾರಾವಾಹಿಗಳಿಂದ ಒಳ್ಳೆಯ ರೀತಿಯ ಬದಲಾವಣೆಯೂ ಆಗುತ್ತಿವೆ. ಮೊದಲು ಹೆಣ್ಣು ತನ್ನ ಭಾವನೆಗಳನ್ನು, ಆಸೆ- ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಆಗುತ್ತಿರಲಿಲ್ಲ. ಪ್ರಶ್ನೆ ಮಾಡುವ ಸ್ವಭಾವ ಹೆಣ್ಣಿನಲ್ಲಿ ಹುಟ್ಟಿದ್ದು ದೃಶ್ಯ ಮಾಧ್ಯಮವನ್ನು ನೋಡಲು ಶುರು ಮಾಡಿದಾಗಿನಿಂದ ಎಂದು ಹೇಳಿದರು.
ವೈಯಕ್ತಿಕ ವ್ಯಕ್ತಿತ್ವವನ್ನು ಟಿವಿ ಮಾರುಕಟ್ಟೆ ಕೊಡುತ್ತಿದೆ. ಹೆಣ್ಣು ತನ್ನ ವ್ಯಕ್ತಿತ್ವವನ್ನು ಸೃಷ್ಠಿಸಿಕೊಳ್ಳುತ್ತಿದ್ದಾಳೆ. ಸ್ವಾವಲಂಬನೆಯನ್ನು ಹೊಂದಲು, ಸ್ವಾಭಿಮಾನಿಯಾಗಿ ಬದುಕಲು ಹಾತೊರೆಯುತ್ತಿದ್ದಾಳೆ ಎಂಬುದೂ ಅಷ್ಟೇ ಸತ್ಯ’ ಎಂದು ಹೇಳಿದರು.
‘ದುಡಿಯುವ ಮಹಿಳೆಯ ಕಲ್ಪನೆಯನ್ನು ಧಾರಾವಾಹಿಗಳು ತೋರಿಸುತ್ತಿಲ್ಲ. ಒಂದು ಮನೆಯಲ್ಲಿ ಮೂರ್ನಾಲ್ಕು ಖಳನಾಯಕಿಯರನ್ನು ತೋರಿಸಿ ವೈಭವೀಕರಿಸುವ ಅಗತ್ಯತೆ ಏನಿದೆ’ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಆರ್. ಸುನಂದಮ್ಮ ಪ್ರಶ್ನಿಸಿದರು. ವಿಚಾರ ಗೋಷ್ಠಿಯನ್ನು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಜಿ.ತಡಸದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.