ADVERTISEMENT

‘ಸಾಮರಸ್ಯ ಮಹತ್ವ ತಿಳಿಸಿದವರು ಸೂಫಿ ಸಂತರು’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 5:47 IST
Last Updated 13 ಮಾರ್ಚ್ 2014, 5:47 IST

ಕೊಲ್ಹಾರ: ಭಾರತ ಬಹುಸಂಸ್ಕೃತಿಯ ನೆಲೆವೀಡು. ಇಲ್ಲಿ ಸಾವಿರಾರು ವರ್ಷ ಗಳಿಂದ ಶಾಂತಿಯಿಂದ ಬದುಕುತ್ತಾ ಜೀವನ ನಡೆಸುತ್ತಿರುವ ಎಲ್ಲಾ ಸ್ತರದ ಜನತೆಯಲ್ಲಿ ತಮ್ಮ ಸರಳ ತತ್ವ ಹಾಗೂ ವಿಚಾರಗಳ ಮೂಲಕ ಸಹೋದರತ್ವ ಹಾಗೂ ಭಾವೈಕ್ಯ ಬೆಳೆದು ಬರಲು ಕಾರಣರಾಗುವ ಮೂಲಕ ಸಾಮರಸ್ಯದ ಮಹತ್ವವನ್ನು ತಿಳಿಸಿಕೊಟ್ಟವರು ಸೂಫಿ ಸಂತರು ಎಂದು ಸಾಹಿತಿ ರಮ್ಜಾನ್‌ ದರ್ಗಾ ಹೇಳಿದರು.

ಕೊಲ್ಹಾರದಲ್ಲಿ ಶನಿವಾರ ಜರುಗಿದ ಸರ್ವಧರ್ಮ ಸದ್ಭಾವನಾ ಸಮಾ ರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಿಜವಾದ ಭಾವೈಕ್ಯ ಎಂದರೆ ಇತರರನ್ನು ಪ್ರೀತಿಯಿಂದ ಕಂಡು ಗೌರವಿ ಸುವುದೇ ಆಗಿದೆ. ಆಡಂಬರದ ಜೀವನ ಮಾರ್ಗಕ್ಕಿಂತ ಜೀವಪರವಾದ ಸರಳ ಆಧ್ಯಾತ್ಮಿಕ ಕ್ರಮಗಳನ್ನು  ಅನುಸರಿಸಿ. ಪ್ರೇಮಭಾವದ ಮೂಲಕ ಜಾತಿ, ಮತ, ಪಂಥಗಳನ್ನು ಮೀರಿ ಬೆಳೆಯುವುದೇ ನಿಜವಾದ ಧರ್ಮ ಎಂದರು.

ಮನುಷ್ಯರನ್ನು ಒಂದುಗೂಡಿಸು ವುದೇ ನಿಜವಾದ ಧರ್ಮ. ದಯೆ ಯಿಂದ ಕ್ರೌರ್ಯವನ್ನು, ಪ್ರೇಮದಿಂದ ಅನೈಕ್ಯತೆಯನ್ನು ದೂರೀಕರಿಸ ಬಹು ದಾದ ಸಾಧ್ಯತೆಯನ್ನು ಈ ನಾಡಿನ ಎಲ್ಲಾ ಸಂತರು, ಶರಣರು ನಮಗೆ ತಿಳಿಸಿ ಕೊಟ್ಟಿದ್ದಾರೆ. ಅವರ ವಾರಸುದಾರ ರಾದ ನಾವು ಈ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿ ಬದುಕಬೇಕಾದ ಅವಶ್ಯಕತೆ ಇದೆ ಎಂದರು.

‘ಓ ಅಲ್ಲಾಕೆ ಬಂದೇ... ತೊಗಲೆಲ್ಲಾ ಒಂದೇ..., ನೀನೇ ಪರಮ ಸುಂದರ, ನಾನು ನಿನ್ನ ಮಂದಿರ’ ಎಂಬ ಸೂಫಿಗಳ ನುಡಿಯಂತೆ ಎಲ್ಲರೂ ಸಾಮರಸ್ಯದಿಂದ ಬದುಕಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರಲ್ಲದೇ, ಎಲ್ಲಾ ಸೂಫಿ ಸಂತರ ಮೊದಲ ಶಿಷ್ಯರು ಹಿಂದುಗಳೇ ಆಗಿದ್ದರು ಎಂಬುದು ವಿಶೇಷ ಎಂದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಖ್ಯಾತ ಪ್ರವಚನಕಾರರಾದ ಇಬ್ರಾಹಿಂ ಸುತಾರ ಭಾವೈಕ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿಜಾ ಪುರದ ಹಾಶಿಂ ಪೀರ್‌  ದರ್ಗಾದ ಹಜರತ್ ಸಯ್ಯದ್ ಶಹಾ ಮುರ್ತುಜಾ ಹುಸೇನಿ ಹಾಶ್ಮಿ, ಕೊಲ್ಹಾರದ ಕಲ್ಲಿನಾಥ ದೇವರು, ಸೋಮನಗೌಡ ಪಾಟೀಲ, ಸಂಗರಾಜ ದೇಸಾಯಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಹ ಭಕ್ತಿಯಾರ್‌ ಖಾನ್ ಪಠಾಣ್ ವಹಿಸಿದ್ದರು. ಎಂ.ಬಿ. ಬಿಜಾಪುರ, ಎಪಿಎಂಸಿ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪ ಗೋಳ, ಶ್ರೀಶೈಲ ಪತಂಗಿ, ಮಹ್ಮದ್‌ ರಫೀಕ್‌ ಟಪಾಲ, ರಫೀಕ್‌ ಪಕಾಲಿ, ಮಲ್ಲು ದೇಸಾಯಿ ಬಿಳಗಿ, ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣ ಭಜಂತ್ರಿ, ಚನಮಲ್ಲಪ್ಪ ಶಾವಿಗೊಂಡ, ಪಿ.ಸಿ. ಬಾವಾ, ಡಾ. ಆರ್.ಬಿ. ಮಠ. ಸಿ.ಎಂ. ಗಣಕುಮಾರ, ನಂದಬಸಪ್ಪ ಚೌಧರಿ ಇದ್ದರು.

ನಜೀರ್‌ ಅಹ್ಮದ್ ಪಟೇಲ್ ಪ್ರಾರ್ಥಿಸಿದರು. ಪರಶು ರಾಮ ಗಣಿ ಸ್ವಾಗತಿಸಿದರು. ಮುಸ್ತಾಕ್ ಬಿದರಿ ನಿರೂಪಿಸಿದರು. ಅಯೂಬ ಖಾನ್ ಪಠಾಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.