ADVERTISEMENT

‘ಸೇನೆ ಸೇರಲು ಸೈನಿಕ ಶಾಲೆ ಹೆಬ್ಬಾಗಿಲು’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:55 IST
Last Updated 25 ಸೆಪ್ಟೆಂಬರ್ 2013, 6:55 IST

ವಿಜಾಪುರ: ‘ಇಲ್ಲಿಯ ಸೈನಿಕ ಶಾಲೆ ನಮ್ಮ ರಾಜ್ಯದ ಹೆಮ್ಮೆ. ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಒಂದರ್ಥದಲ್ಲಿ ಸೇನೆ ಸೇರಲು ಈ ಶಾಲೆ ಹೆಬ್ಬಾಗಿಲು ಇದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ನಗರದ ಸೈನಿಕ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿರುವ ವಿಜಾಪುರ ಸೈನಿಕ ಶಾಲೆಗೆ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ನೆರವು ನೀಡಲಿದೆ’ ಎಂದರು.

‘ಕಳೆದ 50ವರ್ಷಗಳಲ್ಲಿ ಸೈನಿಕ ಶಾಲೆ ರಾಷ್ಟ್ರಕ್ಕೆ ನೀಡಿದ ಕೊಡುಗೆ ಪ್ರಶಂಸನೀಯ. ಆಧುನಿತ ಸರ್ಧಾತ್ಮಕ ಜಗತ್ತಿನಲ್ಲಿ ಅಗತ್ಯವಿರುವ ಉತ್ಕೃಷ್ಠ ಹಾಗೂ ಶ್ರೇಷ್ಠ ಬಹುಮುಖ ಪ್ರತಿಭೆಯುಳ್ಳ ನಾಯಕರನ್ನು ರೂಪಿಸಲು ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಗುಣಮಟ್ಟವನ್ನು ಸೈನಿಕ ಶಾಲೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಾಪುರ ಸೈನಿಕ ಶಾಲೆಯನ್ನು ಆರಂಭಿಸಲು ಶ್ರಮಿಸಿದ ಹಿಂದಿನ ರಕ್ಷಣಾ ಸಚಿವ ದಿ. ಕೃಷ್ಣ ಮೆನನ್, ರಾಜ್ಯದ ಅಂದಿನ ಶಿಕ್ಷಣ ಸಚಿವ ದಿ.ಎಸ್.ಆರ್.ಕಂಠಿ ಅವರನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ವೀರಯೋಧರನ್ನು ನೀಡಿದ ಹೆಮ್ಮೆಯ ನಾಡು. ಇದರ ಜೊತೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯನಂತಹವರ ಸೇನಾ ನಾಯಕರನ್ನು ನೀಡಿದ್ದು, ನಮ್ಮ ರಾಜ್ಯದ ಹಿರಿಮೆ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ವಿಜಾಪುರ ಸೈನಿಕ ಶಾಲೆಗೆ ರೂ. 3.5ಕೋಟಿ ಅನುದಾನ ನೀಡಿದೆ. ಈ ಶಾಲೆಯ ಆವರಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕಾಗಿ ರೂ. 2.6 ಕೋಟಿ ಬಿಡುಗಡೆ ಮಾಡಿದೆ. ಇದರೊಂದಿಗೆ ಸುವ್ಯವಸ್ಥಿತ ಕ್ರೀಡಾ ಸಂಕೀರ್ಣ ನಿರ್ಮಿಸಲು ರೂ. 3 ಕೋಟಿ ನೀಡಿದೆ. ಮುಂದಿನ ದಿನಗಳಲ್ಲಿ ವಿಜಾಪುರ ಸೈನಿಕ ಶಾಲೆಗೆ ರಾಜ್ಯ ಸರ್ಕಾರ ಎಲ್ಲ ನೆರವನ್ನು ನೀಡಲಿದೆ ಎಂದು ಹೇಳಿದರು.

ಸೈನಿಕ ಶಾಲೆಯ ಸಂಸ್ಥಾಪಕ ಶಿಕ್ಷಕ ಜಿ.ಡಿ. ಕಾಳೆ ಅವರನ್ನು ರಾಷ್ಟ್ರಪತಿಗಳು ಸನ್ಮಾನಿಸಿದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಮಾತನಾಡಿದರು. ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎಸ್‌.ಆರ್‌. ಪಾಟೀಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕೆ.ರತ್ನಾಕರ, ಸಂಸದ ರಮೇಶ ಜಿಗಜಿಣಗಿ ವೇದಿಕೆಯಲ್ಲಿದ್ದರು.

ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಶಿವಯೋಗಿ ಕಳಸದ ವಂದಿಸಿದರು. ಲೆಫ್ಟಿನಂಟ್‌ ಜನರಲ್‌ ರಮೇಶ ಹಲಗಲಿ, ಶಿಕ್ಷಣ ಇಲಾಖೆಯ ಆಯುಕ್ತ ಮೊಹ್ಮದ ಮೊಹ್ಸಿನ, ಐಜಿಪಿ ಗೋಪಾಲ ಹೊಸೂರ, ಮಹಿಳಾ ವಿವಿ ಕುಲಪತಿ ಡಾ.ಮೀನಾ ಚಂದಾವರಕರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.