ADVERTISEMENT

ಸಂಚಾರ ನಿಯಮ ಉಲ್ಲಂಘನೆ; ಐದು ತಿಂಗಳಲ್ಲಿ ₹1 ಕೋಟಿ ದಂಡ!

70,905 ಪ್ರಕರಣ ದಾಖಲು

ಬಾಬುಗೌಡ ರೋಡಗಿ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ವಿಜಯಪುರದ ಮಹಾತ್ಮ ಗಾಂಧಿ ಚೌಕ್‌ನಲ್ಲಿ ಮಂಗಳವಾರ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರಿಗೆ ಪೊಲೀಸರು ದಂಡ ವಿಧಿಸಿದರುಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರದ ಮಹಾತ್ಮ ಗಾಂಧಿ ಚೌಕ್‌ನಲ್ಲಿ ಮಂಗಳವಾರ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರಿಗೆ ಪೊಲೀಸರು ದಂಡ ವಿಧಿಸಿದರುಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಐದು ತಿಂಗಳಲ್ಲಿ 70,905 ಪ್ರಕರಣಗಳನ್ನು ದಾಖಲಿಸಿಕೊಂಡು, ₹1.2 ಕೋಟಿ ದಂಡ ವಿಧಿಸಿದೆ.

ಸಂಚಾರ ದಟ್ಟಣೆ, ಸಾರ್ವಜನಿಕರಿಗೆ ಆಗುತ್ತಿರುವ ಅನನುಕೂಲ ತಪ್ಪಿಸಲು ಹಾಗೂ ಸಂಭವನೀಯ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್‌ ಇಲಾಖೆಯು ಏಕಮುಖ ಸಂಚಾರ, ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರು, ಹೋಂ ಗಾರ್ಡ್ಸ್‌ ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಐದು ತಿಂಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಂದ ವಿವಿಧ ಪ್ರಕರಣಗಳಲ್ಲಿ ₹1 ಕೋಟಿಗೂ ಅಧಿಕ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ನಿಲುಗಡೆಯ ಉಲ್ಲಂಘನೆ 168 ಪ್ರಕರಣಗಳಲ್ಲಿ ₹17 ಸಾವಿರ, ಸೀಟ್‌ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ 17,963 ಪ್ರಕರಣಗಳಲ್ಲಿ ₹1,93,600, ಪಾದಚಾರಿ ಮಾರ್ಗ ಅತಿಕ್ರಮಣ 389 ಪ್ರಕರಣಗಳಿಂದ ₹38,900 ದಂಡ ಹಾಕಲಾಗಿದೆ.

ADVERTISEMENT

1,290 ಸಿಗ್ನಲ್‌ ಜಂಪ್‌ ಪ್ರಕರಣಗಳಲ್ಲಿ ₹1.29 ಲಕ್ಷ, ಮಿತಿಗಿಂತ ಹೆಚ್ಚಿನ ಭಾರ ಹೊತ್ತ ವಾಹನಗಳ ವಿರುದ್ಧ 171 ಪ್ರಕರಣಗಳಲ್ಲಿ ₹30,300, ಅಜಾಗರೂಕ ಚಾಲನೆ 282 ಪ್ರಕರಣಗಳಲ್ಲಿ ₹98,900, ಚಾಲನಾ ರಹದಾರಿ ಪತ್ರವಿಲ್ಲದೆ ವಾಹನ ಓಡಿಸಿದ 3,149 ಪ್ರಕರಣಗಳಿಂದ ₹9.64 ಲಕ್ಷ, ಪ್ರಯಾಣಿಕರನ್ನು ಅಪಾಯ ಮಟ್ಟದಲ್ಲಿ ಕರೆದುಕೊಂಡು ಹೋಗುತ್ತಿರುವ ಕುರಿತು 1,783 ಪ್ರಕರಣಗಳಿಂದ ₹4.02 ಲಕ್ಷ, ಪ್ರಕಾಶಮಾನ ದೀಪವನ್ನು ಬಳಸುವವರ ವಿರುದ್ಧ 54 ಪ್ರಕರಣಗಳು ₹5,700, ವಾಹನಗಳ ಮೇಲ್ಭಾಗದಲ್ಲಿ ಸಂಚಾರ 205 ಪ್ರಕರಣಗಳು ₹68,200, ಹೆಚ್ಚಿಗೆ ಹೊಗೆ ಉಗುಳುವ ಕುರಿತು 301 ಪ್ರಕರಣಗಳಲ್ಲಿ ₹53 ಸಾವಿರ ದಂಡ ತುಂಬಿಸಿಕೊಳ್ಳಲಾಗಿದೆ.

ಶಬ್ದಮಾಲಿನ್ಯ, ಧ್ವನಿವರ್ಧನೆ ನಿರ್ಬಂಧ ಉಲ್ಲಂಘನೆಯ 224 ಪ್ರಕರಣಗಳು ₹22,400, ಆಟೊದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಮತ್ತು ಇತರ ಜನರನ್ನು ಕರೆದೊಯ್ಯುವ ಬಗ್ಗೆ 1,190 ಪ್ರಕರಣಗಳು ₹1.78 ಲಕ್ಷ, ವಿಮೆ ಇಲ್ಲದ ವಾಹನಗಳ ವಿರುದ್ಧ 146 ಪ್ರಕರಣಗಳಲ್ಲಿ ₹1 ಲಕ್ಷ, ಇತರೆ ಸಂಚಾರಿ ಉಲ್ಲಂಘನೆಯ 39,558 ಪ್ರಕರಣಗಳಿಂದ ₹47.01 ಲಕ್ಷ ಸೇರಿ ಒಟ್ಟು 70,905 ಪ್ರಕರಣಗಳಲ್ಲಿ ಒಟ್ಟು ₹1.02 ಕೋಟಿ ದಂಡ ಹಾಕಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.