ADVERTISEMENT

ಆಲಮಟ್ಟಿ ಜಲಾಶಯ: 2.25 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 13:50 IST
Last Updated 24 ಜುಲೈ 2024, 13:50 IST
   

ವಿಜಯಪುರ: ಬೆಳಗಾವಿ, ಜಮಖಂಡಿ ಹಾಗೂ ಮಹಾರಾಷ್ಟದ ಕೃಷ್ಣಾ ತೀರದಲ್ಲಿ ಮಹಾಪುರ ಸೃಷ್ಟಿಯಾಗುತ್ತಿದ್ದು, ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ಕಡಿಮೆ ಮಾಡುವ ಉದ್ದೇಶದಿಂದ ಬುಧವಾರ  ರಾತ್ರಿ 7 ಗಂಟೆಯಿಂದ ಹೊರಹರಿವನ್ನು 2.25 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.

ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ. ಸಂಜೆ 6ಕ್ಕೆ ಜಲಾಶಯಕ್ಕೆ 1,78,528 ಕ್ಯುಸೆಕ್ ಒಳಹರಿವು ಇತ್ತು. ಒಳಹರಿವಿಗಿಂತ ಹೊರಹರಿವು ಹೆಚ್ಚಿದ್ದರಿಂದ ಜಲಾಶಯದ ಮಟ್ಟ 517.53 ಮೀಟರ್‌ಗೆ ಕಡಿಮೆಯಾಗಿದೆ. ಇಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯದಿಂದಲೂ ಬಿಡಲಾಗುತ್ತಿದೆ.  

ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಅರಳದಿನ್ನಿ, ಯಲಗೂರು, ಕಾಶಿನಕುಂಟಿ, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ADVERTISEMENT

ಈಗಾಗಲೇ ಮುಂಜಾಗೃತೆಗಾಗಿ ನಿತ್ಯವೂ ಕೃಷ್ಣಾ ತೀರ ಗ್ರಾಮಗಳಲ್ಲಿ ಡಂಗುರ ಸಾರಲಾಗುತ್ತಿದೆ. ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.