ADVERTISEMENT

ಭೀಮಾ ತೀರದ 2405 ಮನೆಗಳು ಜಲಾವೃತ

ಪ್ರವಾಹಕ್ಕೆ ಸಿಲುಕಿದ್ದ 1516 ಸಂತ್ರಸ್ತರ ರಕ್ಷಣೆ; ಕಾಳಜಿ ಕೇಂದ್ರಗಳಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 14:26 IST
Last Updated 17 ಅಕ್ಟೋಬರ್ 2020, 14:26 IST
ಭೀಮಾ ನದಿ ಪ್ರವಾಹದಿಂದ  ಜಲಾವೃತವಾಗಿರುವ ವಿಜಯಪುರ ಜಿಲ್ಲೆಯ ತಾರಾಪುರ ಗ್ರಾಮದ ಸಂತ್ರಸ್ತರನ್ನು ಎನ್‌ಡಿಆರ್‌ಎಫ್  ಸಿಬ್ಬಂದಿ  ಕಾಳಜಿ ಕೇಂದ್ರಕ್ಕೆ ಶನಿವಾರ ಸ್ಥಳಾಂತರಿಸಿದರು
ಭೀಮಾ ನದಿ ಪ್ರವಾಹದಿಂದ  ಜಲಾವೃತವಾಗಿರುವ ವಿಜಯಪುರ ಜಿಲ್ಲೆಯ ತಾರಾಪುರ ಗ್ರಾಮದ ಸಂತ್ರಸ್ತರನ್ನು ಎನ್‌ಡಿಆರ್‌ಎಫ್  ಸಿಬ್ಬಂದಿ  ಕಾಳಜಿ ಕೇಂದ್ರಕ್ಕೆ ಶನಿವಾರ ಸ್ಥಳಾಂತರಿಸಿದರು   

ವಿಜಯಪುರ: ಜಿಲ್ಲೆಯ ಚಡಚಣ, ಇಂಡಿ ಮತ್ತು ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೀಮಾ ನದಿಯ ಪ್ರವಾಹದಿಂದ 2405 ಮನೆಗಳು ಜಲಾವೃತವಾಗಿವೆ.

ಜಲಾವೃತವಾಗಿರುವ ಗ್ರಾಮಗಳಿಂದ11,375 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ 1516 ಜನರನ್ನು ರಕ್ಷಣಾ ತಂಡದವರು ರಕ್ಷಣೆ ಮಾಡಿದ್ದಾರೆ.

ಚಡಚಣ ತಾಲ್ಲೂಕಿನಲ್ಲಿ ಮೂರು, ಇಂಡಿ ಐದು ಮತ್ತು ಸಿಂದಗಿ ತಾಲ್ಲೂಕಿನಲ್ಲಿ 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು,601 ಮಕ್ಕಳು, 592 ಮಹಿಳೆಯರು ಸೇರಿದಂತೆ ಒಟ್ಟು 1861 ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿಜಿಲ್ಲಾಡಳಿತ ಆಶ್ರಯ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ADVERTISEMENT

ಭೀಮಾ ನದಿಯ ಪ್ರವಾಹದಿಂದ ಚಡಚಣ ತಾಲ್ಲೂಕಿನ ಚಣೆಗಾಂವ 68, ಧೂಳಖೇಡ 22, ಶಿರನಾಳ 2, ಉಮರಾಣಿ 40, ಟಾಕಳಿ 32, ಅಣಚಿ 10 ಮತ್ತು ಶಿರಗೂರದಲ್ಲಿ 15 ಮನೆಗಳು ಸೇರಿದಂತೆ 189 ಮನೆಗಳು ಜಲಾವೃತವಾಗಿವೆ.

ಇಂಡಿ ತಾಲ್ಲೂಕಿನ ಹಿಂಗಣಿ 106, ಬರಗುಡಿ 199, ಪಡನೂರ 46, ಶಿರಗೂರ ಇನಾಂ 110, ಗುಬ್ಬೇವಾಡ 180, ಅಗರಖೇಡ 250, ಚಿಕ್ಕಮಣೂರ 250, ಭುಯ್ಯಾರ 92, ಹಳೇ ನಾಗರಹಳ್ಳಿ 25, ಖೇಡಗಿ 270, ರೋಡಗಿ 22, ಮಿರಗಿ 240 ಮನೆಗಳು ಸೇರಿದಂತೆ 1790 ಮನೆಗಳು ಜಲಾವೃತವಾಗಿವೆ.

ಸಿಂದಗಿ ತಾಲ್ಲೂಕಿನಲ್ಲಿ ತಾರಾಪುರ 120, ಶಂಬೇವಾಡ 30, ದೇವಣಗಾಂವ 45, ತಾವರಖೇಡ 88, ಕಡ್ಲೇವಾಡ ಪಿ.ಎ 9, ಕಡಣಿ 4, ಕುಮಸಗಿ 130 ಸೇರಿದಂತೆ 426 ಮನೆಗಳು ಜಲಾವೃತವಾಗಿವೆ.

ಎನ್.ಡಿ.ಆರ್.ಎಫ್. ಎರಡು ತಂಡಗಳು ಸಿಂದಗಿ ತಾಲ್ಲೂಕಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು,ಬೆಳಗಾವಿಯ ಮರಾಠಾ ಲೈಫ್ ಇನ್ಫೆಂಟರಿಯಪ್ರವಾಹ ರಕ್ಷಣಾ ತಂಡವು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಸರ್ವೆ ಕಾರ್ಯದಲ್ಲಿ ತೊಡಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ನೇತೃತ್ವದಲ್ಲಿ ಶನಿವಾರ ದಿನಪೂರ್ತಿ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಚಡಚಣ ತಾಲ್ಲೂಕಿನಲ್ಲಿ ಭೀಮಾ ನದಿ ಪ್ರವಾಹ ಸ್ವಲ್ಪ ಇಳಿಮುಖವಾಗಿರುವುದರಿಂದವಿಜಯಪುರ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.

ಪ್ರವಾಹ: ಸಚಿವೆ ಭೇಟಿ ಇಂದು

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅ.18 ರಂದು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 10.45ಕ್ಕೆ ಚಡಚಣ ತಾಲ್ಲೂಕಿನ ಉಮರಾಣಿ, 11-30ಕ್ಕೆ ಇಂಡಿ ತಾಲ್ಲೂಕಿನ ಅಗರಖೇಡ, ಮಧ್ಯಾಹ್ನ 12.30ಕ್ಕೆ ಸಿಂದಗಿ ತಾಲ್ಲೂಕಿನ ತಾರಾಪೂರ ಪ್ರದೇಶಗಳಲ್ಲಿ ಮಳೆಯಿಂದಾದ ಹಾನಿ ಪರಿಶೀಲನೆ, ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಬಳಿಕ ಮದ್ಯಾಹ್ನ 2ಕ್ಕೆ ಸಿಂದಗಿ ತಹಶೀಲ್ದಾರ್‌ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನೆರೆಹಾವಳಿ ಹಾಗೂ ಕೋವಿಡ್-19 ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.