ADVERTISEMENT

25ಸಾವಿರ ಮಕ್ಕಳ ದಾಖಲಾತಿ ಗುರಿ

ಪ್ರತಿ ಗ್ರಾಮ ಪಂಚಾಯ್ತಿಗೊಬ್ಬ ನೋಡಲ್‌ ಅಧಿಕಾರಿ; ವಿಶೇಷ ದಾಖಲಾತಿ ಆಂದೋಲನ

ಡಿ.ಬಿ, ನಾಗರಾಜ
Published 30 ಮೇ 2018, 10:28 IST
Last Updated 30 ಮೇ 2018, 10:28 IST
ವಿಜಯಪುರದ ಜೋರಾಪುರ ಪೇಟೆಯ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 10ರಲ್ಲಿ ಶಾರದಾ ಪೂಜೆಯೊಂದಿಗೆ ಮಂಗಳವಾರ ಶಾಲಾ ಆರಂಭೋತ್ಸವ ಆಚರಿಸಲಾಯಿತು
ವಿಜಯಪುರದ ಜೋರಾಪುರ ಪೇಟೆಯ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 10ರಲ್ಲಿ ಶಾರದಾ ಪೂಜೆಯೊಂದಿಗೆ ಮಂಗಳವಾರ ಶಾಲಾ ಆರಂಭೋತ್ಸವ ಆಚರಿಸಲಾಯಿತು   

ವಿಜಯಪುರ: ಶೈಕ್ಷಣಿಕ ವರ್ಷ ಶುಭಾರಂಭಗೊಂಡಿದೆ. 2018–19ನೇ ಸಾಲಿನ ವಿಶೇಷ/ಸಾಮಾನ್ಯ ದಾಖಲಾತಿ ಆಂದೋಲನ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳ ವ್ಯಾಪ್ತಿಯಲ್ಲಿ ಬಿರುಸಿನಿಂದ ನಡೆದಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ತೀವ್ರ ಪೈಪೋಟಿ ನಡುವೆಯೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಆಯಾ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಮೂಲಕ ವಿಶೇಷ ಆಂದೋಲನವನ್ನೇ ನಡೆಸಿದೆ.

‘ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಿಗೆ, ಇದೇ 16ರಿಂದ 31ರವರೆಗೆ ಎಲ್ಲೆಡೆ ವಿಶೇಷ ದಾಖಲಾತಿ ಆಂದೋಲನ ನಡೆದಿದೆ. ಈ ಸಮಯ ಆಯಾ ಶಾಲಾ ವ್ಯಾಪ್ತಿಯಲ್ಲಿ ಒಂದನೇ ತರಗತಿಗೆ ಸೇರ್ಪಡೆಯಾಗುವ ಅರ್ಹತೆ ಹೊಂದಿದ ಮಕ್ಕಳ ಸರ್ವೇ ನಡೆಸಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬರಂತೆ ವಿಶೇಷ ದಾಖಲಾತಿ ಆಂದೋಲನದ ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಸ್ಥಳೀಯ ಸಿಆರ್‌ಪಿ, ಬಿಆರ್‌ಪಿಗಳು ಶಿಕ್ಷಣ ಸಂಯೋಜಕರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಸಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ರಾಯಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜೂನ್‌ 1ರಿಂದ 8ರವರೆಗೆ ಅಧಿಕೃತ ದಾಖಲಾತಿ ಆಂದೋಲನ ನಡೆಯಲಿದೆ. ಈ ಸಮಯ ಸ್ಥಳೀಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಮನೆ–ಮನೆಗೆ ತೆರಳಿ ಸರ್ಕಾರಿ ಶಾಲೆಗಳಲ್ಲಿ ದೊರಕುವ ಶಿಕ್ಷಣ, ಸರ್ಕಾರಿ ಸೌಲಭ್ಯ, ಹಲ ಮಹತ್ವದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳನ್ನು ತಮ್ಮ ಶಾಲೆಗೆ ದಾಖಲಾಗುವಂತೆ ಪ್ರೇರೇಪಿಸುವರು’ ಎಂದು ಡಿಡಿಪಿಐ ಹೇಳಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ 2000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿವೆ. ಪ್ರತಿ ಶಾಲೆಗೂ 30ರಿಂದ 40 ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳುವಂತೆ ಗುರಿ ನಿಗದಿ ಪಡಿಸಲಾಗಿದೆ. ಒಟ್ಟಾರೆ 2018–19ನೇ ಸಾಲಿನಲ್ಲಿ 25000ಕ್ಕೂ ಹೆಚ್ಚು ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ರಾಯಪ್ಪ ರೆಡ್ಡಿ ಮಾಹಿತಿ ನೀಡಿದರು.

ಶಾಲಾ ಆರಂಭೋತ್ಸವದ ಬೆನ್ನಿಗೆ ಜಿಲ್ಲೆಯ ಎಲ್ಲೆಡೆ ದಾಖಲಾತಿ ಆಂದೋಲನವೂ ನಡೆದಿದೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಆಯಾ ಶಾಲಾ ವ್ಯಾಪ್ತಿಯಲ್ಲಿ ಮಂಗಳವಾರ ಪ್ರಭಾತ್‌ಪೇರಿ ನಡೆಸಿ, ಗಮನ ಸೆಳೆಯಲಾಯಿತು.

ಕೆಲ ಸರ್ಕಾರಿ ಶಾಲೆಗಳ ಸಿಬ್ಬಂದಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವವರಂತೆ ಪೋಷಕರ ಮನವೊಲಿಕೆಗೆ ಮುಂದಾಗಿರುವ ಚಿತ್ರಣ ಜಿಲ್ಲೆಯ ವಿವಿಧೆಡೆ ಗೋಚರಿಸಿತು.

ವಿಜಯಪುರದ ಜೋರಾಪುರ ಪೇಟೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ಸಿಬ್ಬಂದಿ, ಎಸ್‌ಡಿಎಂಸಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಕರ್ಷಿಸಲು ವಿಶಿಷ್ಟ ಯತ್ನ ನಡೆಸಿದೆ.

ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯ, ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಒಳಗೊಂಡ ಬ್ಯಾನರ್‌, ಕರಪತ್ರಗಳನ್ನು ಮುದ್ರಿಸಿ, ಶಾಲೆಯ ಸುತ್ತಮುತ್ತಲಿನ ಬಡಾವಣೆಗಳಾದ ಜೋರಾಪುರ ಪೇಟೆ, ಗ್ಯಾಂಗ್‌ಬಾವಡಿ, ರಹೀಂ ನಗರ, ಭಾವಸಾರ ನಗರ, ಶಕ್ತಿನಗರಗಳಲ್ಲಿ ಹಂಚುವ ಜತೆಗೆ, ಮನೆ ಮನೆಗೂ ವಿತರಿಸಿ ಮಕ್ಕಳನ್ನು ಶಾಲೆಗೆ ಸೆಳೆಯಲು ಮುಂದಾಗಿದೆ.

‘ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ವಿವಿಧ ಕಸರತ್ತು ನಡೆಸುತ್ತಿದ್ದೇವೆ. ಆದರೆ ಈಚೆಗಿನ ವರ್ಷಗಳಲ್ಲಿ ಆರ್‌ಟಿಇ ಜಾರಿಗೊಂಡ ಬಳಿಕ ಖಾಸಗಿ ಶಾಲೆಯತ್ತ ಚಿತ್ತ ಹೊರಳಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಮನೆ ಮನೆಗೂ ಎಡತಾಕಿ ಪೋಷಕರ ಮನವೊಲಿಸಲು ಮುಂದಾಗಿದ್ದೇವೆ.

ಪ್ರಸಕ್ತ ವರ್ಷ 30 ಮಕ್ಕಳನ್ನು ಒಂದನೇ ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಗುರಿ ಹೊಂದಿದ್ದೇವೆ. ಆದರೆ 20 ಮಕ್ಕಳು ದಾಖಲಾದರೆ ಹೆಚ್ಚು ಎನ್ನುವಂತಹ ವಾಸ್ತವ ಸ್ಥಿತಿ ಎಲ್ಲೆಡೆ ನಿರ್ಮಾಣಗೊಂಡಿದೆ’ ಎಂದು ಜೋರಾಪುರ ಪೇಟೆಯ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 10ರ ಸಹಶಿಕ್ಷಕ ಅಜೀಜ್‌ ಅರಳಿಮಟ್ಟಿ ತಿಳಿಸಿದರು.

**
ಜೂನ್ 4ರ ಸೋಮವಾರದಿಂದ ತರಗತಿಗಳು ಭರ್ತಿಯಾಗಲಿವೆ. ಈಗ ಹಾಜರಾಗುವ ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಬ್ರಿಡ್ಜ್‌ ಕೋರ್ಸ್‌ ಮಾಡುತ್ತಿದ್ದೇವೆ ‌
ಅಜೀಜ್‌ ಅರಳಿಮಟ್ಟಿ, ಶಿಕ್ಷಕ 
**

ಜಿಲ್ಲೆಯ ಎಲ್ಲೆಡೆ ಮಂಗಳವಾರ ಶಾಲಾ ಆರಂಭೋತ್ಸವ ನಡೆದಿದೆ. ಗ್ರಾಮಗಳಲ್ಲಿ ಪ್ರಭಾತ್‌ಪೇರಿ ನಡೆಸಲಾಗಿದೆ. ಮಕ್ಕಳಿಗೆ ಸಿಹಿ ನೀಡುವ ಮೂಲಕ ಸ್ವಾಗತಿಸಿದ್ದೇವೆ 
ಕೆ.ರಾಯಪ್ಪ ರೆಡ್ಡಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.