ADVERTISEMENT

251290, 1077ಗೆ ಕರೆ ಮಾಡಿ ದೂರು ಸಲ್ಲಿಸಿ!

ಗಣೇಶ ಚಂದನಶಿವ
Published 8 ಏಪ್ರಿಲ್ 2013, 6:43 IST
Last Updated 8 ಏಪ್ರಿಲ್ 2013, 6:43 IST

ವಿಜಾಪುರ: ಚುನಾವಣೆಗೆ ಸಂಬಂಧಿಸಿದ ಮಾಹಿತಿ ಬೇಕೆ? ನೀತಿ ಸಂಹಿತೆ ಉಲ್ಲಂಘನೆಯ ದೂರು ನೀಡಬೇಕೆ? ಹಾಗಿದ್ದರೆ ನೀವು 08352-251290 ಅಥವಾ ಟೋಲ್ ಫ್ರೀ ಸಂಖ್ಯೆ 1077 (ಸ್ಥಿರ ದೂರವಾಣಿಯಿಂದ ಮಾತ್ರ)ಗೆ ಕರೆ ಮಾಡಿದರೆ ಸಾಕು. ನಿಮ್ಮ ದೂರು ದಾಖಲಾಗುತ್ತದೆ.

ಜಿಲ್ಲಾ ಚುನಾವಣಾ ಅಧಿಕಾರಿಗಳು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಸಹಾಯವಾಣಿ ಆರಂಭಿಸಿದ್ದಾರೆ. ಈ ಕೇಂದ್ರ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿದ್ದು, ಮೂರು ಪಾಳಿಯಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

`ಮತದಾರರ ಹೆಸರು ಸೇರ್ಪಡೆ, ಪರಿಷ್ಕರಣೆ ಮತ್ತಿತರ ವಿಷಯದಲ್ಲಿ ಮಾಹಿತಿ ನೀಡಲು, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಯಾರಾದರೂ ಹಣ-ಹೆಂಡ, ಮತ್ತಿತರ ಸಾಮಗ್ರಿ ವಿತರಿಸಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದರೆ ಸಾರ್ವಜನಿಕರು ನೇರವಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು' ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಸಿದ್ದಪ್ಪ.

`ಈ ಕೇಂದ್ರದಲ್ಲಿ ದಾಖಲಾಗುವ ದೂರುಗಳನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಇತರ ಅಧಿಕಾರಿಗಳಿಗೆ ತಿಳಿಸಲಾಗುವುದು. ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುತ್ತಾರೆ' ಎನ್ನುತ್ತಾರೆ ಅವರು.

ಈ ಕೇಂದ್ರಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಅವರು ಮೂರು ಪಾಳಿಯಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದು, ದೂರುಗಳ ಸ್ವೀಕಾರಕ್ಕೆ ಒಬ್ಬ ಸಿಬ್ಬಂದಿ ಹಾಗೂ ಒಬ್ಬರು ಅಟೆಂಡರ್ ಹೀಗೆ ಒಂದು ಪಾಳಿಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಮತದಾರರ ಜಾಗೃತಿಯ ಕಾರ್ಯವೂ ಈ ಕೇಂದ್ರದಿಂದ ನಡೆಯುತ್ತಿದೆ ಎಂಬುದು ಅವರ ಮಾಹಿತಿ.

ಮಾರ್ಚ್ 23ರಿಂದ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ವರೆಗೆ ಬಂದ ಹೆಚ್ಚಿನ ದೂರುಗಳು ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿಯ ಲೋಪಕ್ಕೆ ಸಂಬಂಧಿಸಿದ್ದಾಗಿವೆ.

`ಮತದಾರರ ಗುರುತಿನ ಚೀಟಿ ಮಾಡಿಸುವುದು ಹೇಗೆ? ನಮ್ಮಲ್ಲಿ ಮತದಾರರ ಗುರುತಿನ ಚೀಟಿ ಇದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದು, ನಾವೇನು ಮಾಡಬೇಕು? ನಾಮಪತ್ರ ಸಲ್ಲಿಸಲು ಬೇಕಿರುವ ದಾಖಲೆಗಳು ಏನು? ಎಂಬಿತ್ಯಾದಿ ಕರೆಗಳು ಬಂದಿದ್ದು, ಅವರಿಗೆ ಸೂಕ್ತ ಮಾಹಿತಿ ನೀಡಿದ್ದೇವೆ. 

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಪರಿಷ್ಕರಣೆ, ವರ್ಗಾವಣೆಗೆ ಬೇಕಿರುವ ಫಾರ್ಮ್‌ಗಳನ್ನು ನಮ್ಮ ಕೇಂದ್ರದಿಂದಲೂ ಪೂರೈಸಿದ್ದೇವೆ' ಎನ್ನುತ್ತಾರೆ ಈ ಸಹಾಯವಾಣಿ ಕೇಂದ್ರದ ಸಿಬ್ಬಂದಿ ವೈಶಾಲಿ ಜವಳಕರ.

ದೂರವಾಣಿ ಮೂಲಕ ಮಾಹಿತಿ ನೀಡಬಹುದು. ಇಲ್ಲವೆ ಈ ಕೇಂದ್ರಕ್ಕೆ ಖುದ್ದಾಗಿ ಬಂದು ದೂರು ದಾಖಲಿಸಬಹುದು. ಎಲ್ಲ ದೂರುಗಳನ್ನು ದಾಖಲಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸುತ್ತೇವೆ ಎನ್ನುತ್ತಾರೆ ಅವರು.

ವಿಜಾಪುರ ನಗರದ ಬಸವರಾಜ ಮನಗೂಳಿ, ಮಹಾನಂದಾ ಹಿರೇಮಠ, ಹಲಸಂಗಿಯ ವಿಕ್ರಮ್ ಮದಭಾವಿ ಮತ್ತಿತರರು ಮತದಾರರ ಪಟ್ಟಿಯ ದೋಷದ ಬಗ್ಗೆ ದೂರು ನೀಡಿದ್ದರೆ, ವಿಜಾಪುರ ತಾಲ್ಲೂಕು ಕಾರಜೋಳ ಗ್ರಾಮದ ಕಾಂತಾ ಕರಂಡೆ ಮತದಾರರ ಗುರುತಿನ ಚೀಟಿ ಮಾಡಿಸುವ ಬಗೆಯ ಮಾಹಿತಿ ಪಡೆದಿದ್ದಾರೆ. ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರು ಬೂತ್‌ಮಟ್ಟದ ಅಧಿಕಾರಿ ಎಸ್.ಬಿ. ಸೋಮನಾಯಕ ಅವರನ್ನು ಬೇರೆಡೆ ವರ್ಗಾಯಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರು ಸಹ ಈ ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.