ADVERTISEMENT

ಆಲಮಟ್ಟಿ | 5 ಸಾವಿರ ಕ್ಯುಸೆಕ್ ಹೊರಹರಿವು: ವಿದ್ಯುತ್ ಉತ್ಪಾದನೆ ಆರಂಭ

96 ಸಾವಿರ ಕ್ಯುಸೆಕ್ ತಲುಪಿದ ಜಲಾಶಯದ ಒಳಹರಿವು..!

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 15:15 IST
Last Updated 21 ಜುಲೈ 2023, 15:15 IST
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಗಳ ಸಂಗ್ರಹ ಚಿತ್ರ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಗಳ ಸಂಗ್ರಹ ಚಿತ್ರ   

ಆಲಮಟ್ಟಿ: ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಶುಕ್ರವಾರ ಸಂಜೆಯಿಂದ 5 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಈ ನೀರನ್ನು ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಬಿಡಲಾಗಿದ್ದು ಈ ಋತುವಿನಲ್ಲಿ ಮೊದಲ ಬಾರಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ. ಶುಕ್ರವಾರ ಬೆಳಿಗ್ಗೆ 70,780 ಕ್ಯುಸೆಕ್ ಇದ್ದ ಒಳಹರಿವು ಸಂಜೆ 96,805 ಕ್ಯುಸೆಕ್‌ಗೆ ಬಂದು ತಲುಪಿದೆ. ಆಲಮಟ್ಟಿ ಜಲಾಶಯದ ಒಳಹರಿವು ಭಾನುವಾರದ ವೇಳೆಗೆ 1.20 ಲಕ್ಷ್ ಕ್ಯುಸೆಕ್ ತಲುಪುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

‘ವಿದ್ಯುತ್ ಘಟಕದ ಆರು ಘಟಕಗಳ ಪೈಕಿ 55 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಒಂದು ಘಟಕ ಕಾರ್ಯಾರಂಭಗೊಂಡಿದ್ದು, ಅದರಿಂದ ಸುಮಾರು 25 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ’ ಎಂದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.

ADVERTISEMENT

ಕಳೆದ ಏಪ್ರಿಲ್‌ನಿಂದ ಜಲಾಶಯದ ಹೊರಹರಿವು ನಿಂತ ಕಾರಣ ಎಲ್ಲ ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದವು.

ಆಲಮಟ್ಟಿ ಜಲಾಶಯದ ಮುಂಭಾಗ ಹಾಗೂ ನಾರಾಯಣಪುರ ಜಲಾಶಯದ ಹಿಂಭಾಗದಲ್ಲಿನ ಕೃಷ್ಣಾ ನದಿ ಬತ್ತಿ ಹೋಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಜಲಾಶಯದಿಂದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಸಲಾಗುತ್ತಿದೆ ಎಂದು ಪ್ರಭಾರ ಮುಖ್ಯ ಎಂಜಿನಿಯರ್ ಡಿ. ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.