ವಿಜಯಪುರ: ‘ಮಳೆ ಮತ್ತು ನೆರೆಯಿಂದ ತೊಂದರೆಗೆ ಒಳಗಾಗಿರುವ ಜಿಲ್ಲೆಯ ಸಂತ್ರಸ್ತರಿಗೆ ತುರ್ತಾಗಿ ತಲಾ ₹5 ಸಾವಿರ ಪರಿಹಾರ ಒದಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಡಿಆರ್‌ಎಫ್ ನಿಯಮಗಳನ್ವಯ ನೀಡುವ ಪರಿಹಾರ ಮೊತ್ತ ಕಡಿಮೆ ಇರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಎನ್‌ಡಿಆರ್‌ಎಫ್ ನಿಯಮಾವಳಿ ಬದಲಿಸಿ, ದುಪ್ಪಟ್ಟು ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿ ಅವರು ಸೆಪ್ಟೆಂಬರ್ 30ರಂದು ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದು, ಬಳಿಕ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರದ ಜೊತೆಗೆ ಹೆಚ್ಚುವರಿ ಪರಿಹಾರ ಕೊಡಿಸಲು ಸರ್ಕಾರದ ಮೇಲೆ ಜಿಲ್ಲೆಯ ಶಾಸಕರೊಂದಿಗೆ ಒತ್ತಡ ಹೇರಲಾಗುವುದು’ ಎಂದರು.
ಕಾಳಜಿ ಕೇಂದ್ರ: ‘ಅತಿಯಾದ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಇಂಡಿ ತಾಲ್ಲೂಕಿನ 8 ಗ್ರಾಮಗಳು ಮತ್ತು ಆಲಮೇಲ ತಾಲ್ಲೂಕಿನ 6 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಒಟ್ಟು 17 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.
‘ಇಂಡಿ ತಾಲ್ಲೂಕಿನಲ್ಲಿ 541 ಜನ, ಆಲಮೇಲ ತಾಲ್ಲೂಕಿನಲ್ಲಿ 319 ಜನ ಸೇರಿದಂತೆ ಒಟ್ಟು 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಕಾಳಜಿ ಕೇಂದ್ರಗಳಲ್ಲಿ ವಸತಿ, ಉಪಾಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
ಬೆಳೆ ಹಾನಿ: ‘ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಸೇರಿದಂತೆ 1,38,239 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಪ್ರಗತಿಯಲ್ಲಿತದೆ. ಗ್ರಾಮೀಣ ಪ್ರದೇಶದಲ್ಲಿ 8 ಸೇತುವೆಗಳು, ಹಾಗೂ 27 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ’ ಎಂದು ತಿಳಿಸಿದರು.
ಮೂಲ ಸೌಕರ್ಯಕ್ಕೆ ಹಾನಿ: ‘ಜಿಲ್ಲೆಯಲ್ಲಿ 16.01 ಕಿ.ಮೀ. ರಾಜ್ಯ ಹೆದ್ದಾರಿ, 62.47 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು, 29 ಸೇತುವೆ, 1152 ಕಿ.ಮೀ. ಗ್ರಾಮೀಣ ರಸ್ತೆ, 151 ಅಂಗನವಾಡಿಗಳು, 54 ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಿಗೆ ಹಾನಿಯಾಗಿದೆ’ ಎಂದರು.
‘ಜಿಲ್ಲಾಧಿಕಾರಿ ಪಿ.ಡಿ.ಖಾತೆಯಲ್ಲಿ ₹39 ಕೋಟಿ ಅನುದಾನ ಹಾಗೂ ಜಿಲ್ಲೆಯ ತಹಶೀಲ್ದಾರ್‌ಗಳ ವಿಪತ್ತು ನಿರ್ವಹಣಾ ನಿಧಿಯ ಖಾತೆಗಳಲ್ಲಿ ಒಟ್ಟು ₹4.06 ಕೋಟಿ ಅನುದಾನ ಇದೆ’ ಎಂದು ಹೇಳಿದರು.
ಶಾಸಕರಾದ ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಆನಂದ ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.
10 ಜನ 69 ಜಾನುವಾರು ಸಾವು
‘ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಸಿಡಿಲು ಪ್ರವಾಹದಿಂದ ಜಿಲ್ಲೆಯಲ್ಲಿ 10 ಜನರು ಸಾವಿಗೀಡಾಗಿದ್ದು ಅವರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. 69 ಜಾನುವಾರುಗಳು ಸಾವಿಗೀಡಾಗಿದ್ದು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನುಸಾರ ಪರಿಹಾರಧನ ನೀಡಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ‘ಜಿಲ್ಲೆಯಲ್ಲಿ ಇಲ್ಲಿವರೆಗೂ ಒಟ್ಟು 1041 ಮನೆಗಳು ಹಾನಿಯಾಗಿದ್ದು ಶೇ 15ರಿಂದ ಶೇ 20ರಷ್ಟು ಹಾನಿಯಾದ 502 ಮನೆಗಳಿಗೆ ತಲಾ ₹6500 ಶೇ 20ರಿಂದ ಶೇ50ರಷ್ಟು ಹಾನಿಯಾದ 163 ಮನೆಗಳಿಗೆ ತಲಾ ₹30 ಸಾವಿರ ಮತ್ತು ಶೇ 50ರಿಂದ ಶೇ 75ರಷ್ಟು ಹಾನಿಯಾದ 10 ಮನೆಗಳಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗಿದೆ. ಬಾಕಿ ಉಳಿದ 366 ಹಾನಿಯಾದ ಮನೆಗಳ ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ’ ಎಂದರು. ‘ಗೃಹೋಪಯೋಗಿ ವಸ್ತುಗಳ ಹಾನಿ ಮತ್ತು ಮಳೆ ನೀರು ನುಗ್ಗಿರುವ ಒಟ್ಟು 270 ಮನೆಗಳಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ₹13.50 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.