ADVERTISEMENT

ಕಾರ್ತೀಕೋತ್ಸವ; ಅಹೋರಾತ್ರಿ ಸಂಗೀತೋತ್ಸವ

ಚಂದ್ರಶೇಖರ ಕೊಳೇಕರ
Published 3 ಫೆಬ್ರುವರಿ 2018, 5:17 IST
Last Updated 3 ಫೆಬ್ರುವರಿ 2018, 5:17 IST

ಯಲಗೂರು (ನಿಡಗುಂದಿ): ಸುಕ್ಷೇತ್ರ ಯಲಗೂರಿನ ಕ್ಷೇತ್ರದ ಅಧಿಪತಿ ಯಲಗೂರೇಶ್ವರನ ಕಾರ್ತೀಕ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶನಿವಾರ (ಫೆ.3) ನಸುಕಿನಿಂದಲೇ ಪವನಸುತನ ದರ್ಶನಕ್ಕೆ ಜನ ಮೈಲುಗಟ್ಟಲೇ ದೇಗುಲದ ಮುಂಭಾಗ ಸರದಿಯಲ್ಲಿ ನಿಂತು ಕಾಯುವ ದೃಶ್ಯಾವಳಿ ಗೋಚರಿಸಲಿದೆ. ಈಗಾಗಲೇ ಅನೇಕ ಪಾದಯಾತ್ರಿ ತಂಡಗಳು ಸನ್ನಿಧಿ ತಲುಪಿದ್ದು, ಸ್ವಾಮಿಯ ಸೇವೆಯಲ್ಲಿ ನಿರತವಾಗಿವೆ.

ಹೊರ ರಾಜ್ಯದ ಭಕ್ತರು ದೇಗುಲದ ಪ್ರಾಂಗಣದಲ್ಲಿ ಬೀಡು ಬಿಟ್ಟಿದ್ದು, ರಾಮ ಭಂಟನ ಜಪ ಮಾಡುತ್ತಿವೆ. ಎತ್ತ ನೋಡಿದರೂ ಯಲಗೂರದಪ್ಪನ ಭಕ್ತರಿಂದ ಹನುಮ ಜಪವೇ ನಡೆದಿದೆ. ಜಯ ಜಯ ಹನುಮ ಅನುರಣಿಸುತ್ತಿದೆ.

ಕಾರ್ತೀಕೋತ್ಸವದ ಮೂರು ದಿನವೂ ದೇಗುಲ ಸಮಿತಿ ಸಂಗೀ ತೋತ್ಸವ ಆಯೋಜಿಸಿದೆ. ಒಂದೆಡೆ ಅಹೋರಾತ್ರಿ ಹರಿದಾಸ ಸಂಗೀತ ನಡೆದರೆ, ಮತ್ತೊಂದೆಡೆ ಗ್ರಾಮೀಣ ಭಾಗದ ಜನರ ವಿವಿಧ ಸ್ಪರ್ಧೆಗಳು. ಇನ್ನೊಂದೆಡೆ ನಿರಂತರ ದಾಸೋಹ ಆಯೋಜನೆಗೊಂಡಿದೆ.

ADVERTISEMENT

ಈ ಬಾರಿ ಅಹೋರಾತ್ರಿ ನಡೆಯಲಿರುವ ಸಂಗೀತೋತ್ಸವದಲ್ಲಿ ಸಂಗೀತಾ ಕಟ್ಟಿ ಕುಲಕರ್ಣಿ, ಡಾ.ರವಿ ನಾಕೋಡ ಅವರ ಗಾಯನ ಜುಗಲ್‌ಬಂದಿ ನಡೆಯಲಿದೆ.

ಸಂತೋಷ ಗದ್ದನಕೇರಿ, ಪದ್ಮಶ್ರೀ ಜೋಷಿ, ರಘೋತ್ತಮ ಜೋಷಿ, ಸಂಗೀತಾ ಕಾಖಂಡಕಿ, ನಾಗರಾಜ ಕುಲಕರ್ಣಿ, ಲಾವಣ್ಯ, ಸ್ನೇಹಾ, ಪ್ರೇಮಾ ಕಡಿವಾಲ, ಸುಸ್ವರ ಬಳಗ, ಜಿ.ಬಿ.ಕುಲಕರ್ಣಿ, ನೃತ್ಯರಂಗದ ಸುಭದ್ರಾ ದೇಶಪಾಂಡೆ, ಸುಬ್ಬರಾವ್ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ರೇಣುಕಾ, ರಘುನಾಥ, ಭೂಮಿಕಾ, ಅಕ್ಷತಾ, ಅರಣ್ಯಕುಮಾರ, ರಜತ ಕುಲಕರ್ಣಿ, ಶ್ರೀನಿಧಿ ಕುಲಕರ್ಣಿ, ಸುಮತಿ ಜೋಷಿ, ಗೀತಾ ಕುಲಕರ್ಣಿ, ಮೋಹನ ಕಲಬುರ್ಗಿ, ವೈಷ್ಣವಿ ಪಂಚಮುಖಿ, ಶ್ರೀಹರಿ ದಿಘ್ಘಾವಿ, ವೀಣಾ ಬಡಿಗೇರ, ವೀರೇಶ ನಾಗಠಾಣ, ಜಯತೀರ್ಥ ತಾಸಗಾಂವ, ರಾಘವೇಂದ್ರ ಗುಡಿ, ಶೇಷಗಿರಿ ಗುಡಿ, ರಾಘವೇಂದ್ರ ಕಟ್ಟಿ, ನಾರಾಯಣ ತಾಸಗಾಂವ, ರಾಜೇಂದ್ರ ದೇಶಪಾಂಡೆ ಇವರಿಂದ ಸುಶ್ರಾವ್ಯ ಗಾಯನ, ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮ ಅಹೋರಾತ್ರಿ ನಡೆಯಲಿದೆ.

ಉಡುಪಿಯ ಮಹಾ ಗಣಪತಿ ಕಲಾ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಾರುತಿ ಮಹಿಮೆ ರೂಪಕ, ಯಕ್ಷಗಾನ ನಡೆಯಲಿದೆ. ಸುಜಾತ ಗುರವ್, ಪಂ.ರವೀಂದ್ರ ಯಾವಗಲ್, ಕಿರಣ ಯಾವಗಲ್‌, ನಯನ ಯಾವಗಲ್, ಗಣೇಶ ಹೆಗಡೆ ಇವರಿಂದ ಸಂಗೀತ ಕಾರ್ಯಕ್ರಮ, ದಾಸವಾಣಿ ಜರುಗಲಿದೆ.

ಫೆ 4ರ ಭಾನುವಾರ ಬೆಳಿಗ್ಗೆ 10ಕ್ಕೆ ಮುಧೋಳ ತಳಿಯ ನಾಯಿಗಳ ಓಟದ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಹೊಂಡ ಪೂಜೆ, ಪಲ್ಲಕ್ಕಿ ಪೂಜೆ, ಜಗಮೆಚ್ಚಿದ ಮಗ ನಾಟಕ ಪ್ರದರ್ಶನಗೊಳ್ಳಲಿದೆ.

5ರ ಸೋಮವಾರ ಬೆಳಿಗ್ಗೆ 10ಕ್ಕೆ ಸಂಗ್ರಾಣಿ ಒತ್ತಕಲ್ಲು, ಸಿಡಿಗಲ್ಲು, ತೆಕ್ಕೆ ಬಡಿದು ಚೀಲ ಎತ್ತುವುದು, ಉಸಕಿನ ಚೀಲ ಎತ್ತುವ ಸ್ಪರ್ಧೆ, ಸಂಜೆ 4ಕ್ಕೆ ಜಂಗಿ ಕುಸ್ತಿಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.