ADVERTISEMENT

‘₹30 ಕೋಟಿ ಷೇರು ಬಂಡವಾಳ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 5:18 IST
Last Updated 3 ಫೆಬ್ರುವರಿ 2018, 5:18 IST

ವಿಜಯಪುರ: ‘ಸಹಕಾರಿ ವಲಯದಲ್ಲಿ ದೇಶಕ್ಕೆ ಮಾದರಿಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ, ರಾಜ್ಯ ಸರ್ಕಾರ ₹30 ಕೋಟಿ ಷೇರು ಬಂಡವಾಳ ಹೂಡಲು ಪ್ರಾಮಾ ಣಿಕವಾಗಿ ಶ್ರಮಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಭರವಸೆ ನೀಡಿದರು.

ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ರಜತ ಮಹೋತ್ಸವ, 50 ಕೆಎಲ್‌ಪಿಡಿ ಇಥೆನಾಲ್ ಘಟಕ, ಕೆ.ಎಚ್.ಪಾಟೀಲ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಮಾದರಿ, ಆದರ್ಶಮಯವಾದ ಸಕ್ಕರೆ ಕಾರ್ಖಾನೆ’ ಎಂದು ಶ್ಲಾಘಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ ‘ಕಾರ್ಖಾನೆಗೆ ಸರ್ಕಾರ ಅನುದಾನ ನೀಡಿದರೆ ಗೌರವ ಸಿಗಲಿದೆ. ಈ ಕಾರ್ಖಾನೆ
ಈ ಭಾಗದ ಜನರ ಆರ್ಥಿಕ– ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ’ ಎಂದು ಹೇಳಿದರು.

ADVERTISEMENT

ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ ‘ಆಡಳಿತ ಯಂತ್ರ ಕುಸಿದು, ಅನೇಕ ಸಹಕಾರಿ ವಲಯದ ಕಾರ್ಖಾನೆಗಳು ಖಾಸಗಿಯವರ ಪಾಲಾದ ನಿದರ್ಶನವಿದೆ. ಇಂತಹ ಪರಿಸ್ಥಿತಿಯಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 25 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದೆ. ರೈತರಿಗೆ ನೆರವಾಗುವ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಡ್ಡಿ ರಹಿತ ಸಾಲ ನೀಡಿದರು..: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ದಿನಗಳನ್ನು ಸ್ಮರಿಸಿದ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ ಕಾರ್ಖಾನೆಯ ಪ್ರಗತಿ ವಿವರಿಸಿದರು.

ದಿ.ಕೆ.ಎಚ್.ಪಾಟೀಲ, ದಿ.ಬಿ.ಟಿ.ಪಾಟೀಲ ಸೇರಿದಂತೆ ಹಲ ಮಹನೀಯರ ಪ್ರಯತ್ನದ ಫಲವಾಗಿ ಕಾರ್ಖಾನೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಆರಂಭದ ಸಮಯದಲ್ಲಿ ನಾವೆಲ್ಲರೂ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಳಿ ನಿಯೋಗ ಹೋಗಿದ್ದೆವು, ಅನೇಕ ನಾಯಕರು ಜತೆಗಿದ್ದರು.

₹ 2 ಕೋಟಿ ಸಾಲ ಒದಗಿಸುವಂತೆ ಮನವಿ ಮಾಡಿದೆವು, ಆಗ ಬಂಗಾರಪ್ಪ, ‘ಇದು ರೈತ ವಲಯದ ಕಾರ್ಖಾನೆ ಎಂದು ಹೇಳುತ್ತೀರಿ. ಕಡಿಮೆ ಬಡ್ಡಿ ಏಕೆ ? ಬಡ್ಡಿ ಇಲ್ಲದೆಯೇ ಸಾಲ ನೀಡಲಾಗುವುದು ಎಂದು ಹುರಿದುಂಬಿಸಿದ್ದನ್ನು’ ಪಾಟೀಲ ಸ್ಮರಿಸಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಕಾರ್ಖಾನೆಯ ಪ್ರಗತಿಯನ್ನು ಶ್ಲಾಘಿಸಿ ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕರಾದ ಜೆ.ಟಿ.ಪಾಟೀಲ, ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಜಿ.ಪಂ.ಸದಸ್ಯರಾದ ಕಲ್ಲಪ್ಪ ಕೊಡಬಾಗಿ, ಉಮೇಶ ಕೋಳಕೂರ, ಮುಖಂಡ ರಾದ ಬಸವರಾಜ ದೇಸಾಯಿ, ಅಪ್ಪುಗೌಡ ಪಾಟೀಲ ಮನಗೂಳಿ, ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.