ADVERTISEMENT

ಸಾವಯವ ಕೃಷಿ: ಧಾನ್ಯ ಬೆಳೆದು ಸಿರಿವಂತನಾದ ರೈತ

ಅಲ್ಲಮಪ್ರಭು ಕರ್ಜಗಿ
Published 17 ನವೆಂಬರ್ 2023, 4:44 IST
Last Updated 17 ನವೆಂಬರ್ 2023, 4:44 IST
ಚಡಚಣ ಸಮೀಪದ ಲೋಣಿ ಬಿ.ಕೆ.ಗ್ರಾಮದಲ್ಲಿ ರೈತ ಮಲ್ಲೇಶಪ್ಪ ಕಲ್ಯಾಣಶೆಟ್ಟಿ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಜೋಳ
ಚಡಚಣ ಸಮೀಪದ ಲೋಣಿ ಬಿ.ಕೆ.ಗ್ರಾಮದಲ್ಲಿ ರೈತ ಮಲ್ಲೇಶಪ್ಪ ಕಲ್ಯಾಣಶೆಟ್ಟಿ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಜೋಳ   

ಚಡಚಣ: ವೃತ್ತಿಯಲ್ಲಿ ಟೇಲರ್‌ ಆದರೂ ಪ್ರವೃತ್ತಿಯಲ್ಲಿ ರೈತರಾದ ಲೋಣಿ (ಬಿ.ಕೆ) ಗ್ರಾಮದ ಮಲ್ಲೇಶಪ್ಪ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ಮಾದರಿಯಾಗಿದ್ದಾರೆ.

ತಮ್ಮ 10 ಏಕರೆ ಜಮೀನಿನಲ್ಲಿ ವಿವಿಧ ಬಗೆಯ ಧಾನ್ಯಗಳನ್ನು ಬೆಳೆಯುತ್ತಾರೆ. ಮಳೆಯಾಧಾರಿತವಾಗಿ ನೈಸರ್ಗಿಕವಾಗಿ ಈ ಭಾಗದಲ್ಲಿ ಬೆಳೆಯುವ ಎಲ್ಲ ಬಗೆಯ ಬೆಳೆಗಳನ್ನೂ ಬೆಳೆದು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ.

ಇವರು ಆದಾಯಕ್ಕಿಂತ ಆರೋಗ್ಯ ಮುಖ್ಯ ಎಂಬ ಪರಿಕಲ್ಪನೆಯ ಮೇಲೆ ವ್ಯವಸಾಯ ಮಾಡುತ್ತಾರೆ. ಜೋಳ, ಬೆಳೆಕಾಳು, ಸೆಂಗಾ, ಹುರುಳಿ, ಮುಕಣಿ, ಅವರೆಕಾಳು ಹಾಗೂ ವಿವಿಧ ಬಗೆಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರವಾಗಲಿ, ಕೀಟನಾಶಕಗಳನ್ನು ಬಳಕೆ ಮಾಡದೇ, ನೈಸರ್ಗಿಕವಾಗಿ ಬೆಳೆಯುತ್ತಾರೆ.

ADVERTISEMENT

ಮನೆಗೆ ಸಾಕಾಗುವಷ್ಟು ಬೆಳೆ ಬೆಳೆಯುತ್ತಿದ್ದು ಉಳಿದ ಧಾನ್ಯಗಳನ್ನು ಕೃಷಿ ಉತ್ಪನ್ನ  ಮಾರಾಟ ಮಳಿಗೆಗಳಿಗೆ ಮಾರಾಟ ಮಾಡುತ್ತಾರೆ.

20 ವರ್ಷಗಳಿಂದ ವ್ಯವಸಾಯ ಮಾಡುತ್ತ ಬಂದಿರುವ ಇವರು, ಕೃಷಿ ತ್ಯಾಜ್ಯಗಳನ್ನು, ಕಳೆಗಳ ಉಳಿಕೆಗಳನ್ನು ರೋಟಾವೇಟರ್‌ ಸಹಾಯದಿಂದ ಪುಡಿ ಮಾಡಿ ಭೂಮಿಯಲ್ಲೇ ಹಾಕಿ ಮುಚ್ಚುತ್ತಿದ್ದಾರೆ. ಇದರಿಂದ ಸೂಕ್ಷ್ಮಾಣುಗಳು ಉತ್ಪತ್ತಿಯಾಗಿ ಭೂಮಿಯ ಫಲವತ್ತತೆ ವೃದ್ಧಿಸುತ್ತಿದೆ. ಇದೇ ಜಮೀನಿಗೆ ಗೊಬ್ಬರವಾಗುತ್ತಿದೆ ಎಂದು ಅವರು ತಿಳಿಸುತ್ತಾರೆ.

ತಮ್ಮ ಜಮೀನಿನ ಸ್ವಲ್ಪ ಭಾಗದಲ್ಲಿ ಸಾಗವಾನಿ, ಹುಣಸೆ ಮರಗಳನ್ನೂ ಬೆಳೆದಿದ್ದಾರೆ. ಬಾರೆ ಬೆಳೆಯೂ ಇದೆ.

ಮಲ್ಲೇಶಪ್ಪ ಅವರಿಗೆ ವಯಸ್ಸು 60 ದಾಟಿದ್ದರೂ, ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಎಲ್ಲೇ ಕೃಷಿ ಮೇಳವಿದ್ದರೂ ಅವರು ಅಲ್ಲಿ ಹಾಜರಾಗಿರುತ್ತಾರೆ. ತಮ್ಮ ತೋಟದಲ್ಲಿ ಬೆಳೆದ ಧಾನ್ಯಗಳನ್ನು ಪೊಟ್ಟಣಗಳಲ್ಲಿ ಮಾರಾಟ ಮಾಡುತ್ತಾರೆ. ರೈತರಿಗೆ ಸಮಗ್ರ ನೈಸರ್ಗಿಕ ಕೃಷಿ ಪದ್ಧತಿ ಕುರಿತು ಉಪಯುಕ್ತ ಮಾಹಿತಿ ನೀಡುತ್ತಾರೆ.

ಕೃಷಿ ವಿಜ್ಞಾನಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇವರು, ಅವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಅವರ ಜಮೀನಿಗೆ ಹಲವು ರೈತರು, ಕೃಷಿ ವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡುವದು ಸಾಮಾನ್ಯ. ಹಲವು ‘ಉತ್ತಮ ಕೃಷಿಕ’ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

16 ಸಿಡಿಎನ್-02‌ ಕಳೆದ ಸಾಲಿನಲ್ಲಿ ಧಾರವಾಡದಲ್ಲಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆ ಕೃಷಿ ಮಳೆದಲ್ಲಿ ಅವರ ಮಳಿಗೆಗೆ ಕೃಷಿ ವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಸಿರಿಧಾನ್ಯಗಳ ಮಾಹಿತಿ ಪಡೆದ ಕ್ಷಣ

ಆದಾಯಕ್ಕಿಂತ ಆರೋಗ್ಯ ಮುಖ್ಯ. ಪ್ರತಿಯೊಬ್ಬರು ನೈಸರ್ಗಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಸಿರಿಧಾನ್ಯ ಬೆಳೆಯಬೇಕು

-ಮಲ್ಲೇಶಪ್ಪ ಕಲ್ಯಾಣಶೆಟ್ಟಿ, ರೈತ ಲೋಣಿ ಬಿ.ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.