ADVERTISEMENT

ವಿಜಯಪುರ: ತುಂಬು ಗರ್ಭಿಣಿ, ಪುಟ್ಟ ಮಗಳ ಕಾಣುವ ಹಂಬಲ

ಕೊರೊನಾ ವಾರಿಯರ್ಸ್ ಶ್ರೀಹರ್ಷ ಶೆಟ್ಟಿ ಭಾವುಕ ಕ್ಷಣ

ಬಸವರಾಜ ಸಂಪಳ್ಳಿ
Published 8 ಮೇ 2020, 2:25 IST
Last Updated 8 ಮೇ 2020, 2:25 IST
ವಿಜಯಪುರ ನಗರಲ್ಲಿ ಕೋವಿಡ್‌ ಕಂಟೈನ್ಮೆಂಟ್‌ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ದೂರದಿಂದಲೇ ತಮ್ಮ ಮಗಳು, ಪತ್ನಿಯನ್ನು ಮಾತನಾಡಿಸುತ್ತಿರುವ ಭಾವುಕ ಕ್ಷಣ             
ವಿಜಯಪುರ ನಗರಲ್ಲಿ ಕೋವಿಡ್‌ ಕಂಟೈನ್ಮೆಂಟ್‌ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ದೂರದಿಂದಲೇ ತಮ್ಮ ಮಗಳು, ಪತ್ನಿಯನ್ನು ಮಾತನಾಡಿಸುತ್ತಿರುವ ಭಾವುಕ ಕ್ಷಣ                

ವಿಜಯಪುರ: ‘ಪತ್ನಿ ಚೈತನ್ಯ ಏಳು ತಿಂಗಳ ಗರ್ಭೀಣಿ, ಈ ಸಂದರ್ಭದಲ್ಲಿ ಅವಳೊಂದಿಗೆ ಹೆಚ್ಚು ಹೊತ್ತು ಇರಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಆದರೂ ಕೊರೊನಾ ಸಂಕಷ್ಟದಲ್ಲಿರುವವರ ಸೇವೆ ಖುಷಿ ತಂದಿದೆ’

ಹೀಗೆಂದು ತಮ್ಮ ಸಂಕಷ್ಟವನ್ನು ‘ಪ್ರಜಾವಾಣಿ’ ಬಳಿ ಹೇಳಿಕೊಂಡು ಸಮಾಧಾನಪಟ್ಟವರು 47 ಜನ ಕೋವಿಡ್‌ ಸೋಂಕಿತರುವ ಚಪ್ಪರಬಂದ್‌ ಕಂಟೈನ್ಮೆಂಟ್‌ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ (ಇನ್ಸಿಡೆಂಟ್‌ ಕಮಾಂಡರ್‌) ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ.

‘ನಾಲ್ಕು ವರ್ಷದ ಮಗಳು ಸಾನ್ವಿತಾ ನನಗಾಗಿ ಕ್ಷಣಕ್ಷಣಕ್ಕೆ ಹಂಬಲಿಸುತ್ತಿರುತ್ತಾಳೆ. ಪ್ರತಿದಿನ ಒಂದೆರಡು ಬಾರಿ ಫೋನ್‌ ಮೂಲಕ ಅವಳೊಂದಿಗೆ ಮಾತನಾಡುತ್ತೇನೆ. ಮನೆಗೆ ಬಾ ಎಂದು ಹಠ ಹಿಡಿದು ಅಳುತ್ತಾಳೆ’ ಎಂದು ಅವರು ಬೇಸರಿಸಿಕೊಂಡರು.

ADVERTISEMENT

‘ನಗರದಲ್ಲೇ ಮನೆಯಿದ್ದರೂ ಪತ್ನಿ, ಮಗಳು ಮತ್ತು ಕುಟುಂಬದ ಸುರಕ್ಷತೆಗಾಗಿ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೇನೆ.ವಾರಕ್ಕೊಮ್ಮೆ ಮನೆಗೆ ಭೇಟಿ ಮಾಡಿ ಬರುತ್ತೇನೆ’ ಎಂದರು.

‘ಪ್ರತಿದಿನ ಬೆಳಿಗ್ಗೆ 5.30ರಿಂದ ಕಂಟೈನ್ಮೆಂಟ್‌ ಪ್ರದೇಶದಲ್ಲಿ ನಮ್ಮ ಕಾರ್ಯ ಆರಂಭವಾದರೆ ಮುಗಿಯುವುದು ರಾತ್ರಿ 10 ಗಂಟೆಯಾಗುತ್ತದೆ. ಕೆಲವೊಂದು ದಿನ ತಡರಾತ್ರಿಯೂ ಆಗಿತ್ತದೆ. ಹಗಲಿಡಿ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಸುತ್ತಾಡುವುದರಿಂದ ಇತಂಹ ಸಂದರ್ಭದಲ್ಲಿ ಕುಟುಂಬದಿಂದ ದೂರ ಉಳಿದಿದ್ದೇನೆ’ ಎಂದು ಹೇಳಿದರು.

‘ಸುರಕ್ಷತೆ ದೃಷ್ಟಿಯಿಂದ ನಾನೂ ಎರಡು ಬಾರಿ ಗಂಟಲುದ್ರವ ಪರೀಕ್ಷೆ ಮಾಡಿಸಿಕೊಂಡಿದ್ದೇವೆ’ ಎಂದರು.

ದುಡಿಮೆಯೇ ಜೀವನ

‘ಕಂಟೈನ್ಮೆಂಟ್‌ ಪ್ರದೇಶದಲ್ಲಿ ಬಹುತೇಕ ಜನ ಕಡುಬಡವರಿದ್ದಾರೆ. ಪ್ರತಿದಿನದ ದುಡಿಮೆ ಅವಲಂಭಿಸಿ ಜೀವನ ಸಾಗಿಸುವವರೇ ಹೆಚ್ಚಿನವರಿದ್ದಾರೆ. ಲಾಕ್‌ಡೌನ್‌, ಸೀಲ್‌ಡೌನ್ ಪರಿಣಾಮ ಇವರ ಜೀವನ ಸಾಗಿಸುವುದೇ ಕಷ್ಟಪಡುತ್ತಿದ್ದಾರೆ. ಅಂತವರಿಗೆ ನೆರವಾಗುತ್ತಿರುವುದು ಖುಷಿ ತಂದಿದೆ’ ಎಂದರು.

‘ಬಡ ಕುಟುಂಬಗಳಿಗೆ ದಾನಿಗಳಿಂದ ಸಂಗ್ರಹಿಸಿದ ₹ 4 ಕೋಟಿ ಮೊತ್ತದ ಆಹಾರದ ಕಿಟ್‌ಗಳನ್ನು ಇದುವರೆಗೆ ನಾಲ್ಕು ಸಾವಿರ ಮನೆಗಳಿಗೆ ತಲುಪಿಸಿರುವುದು ಮನಸ್ಸಿಗೆ ಸಮಧಾನ ತಂದಿದೆ’ ಎಂದು ಹೇಳಿದರು.

ಸನ್ಮಾನ

‘ಕಂಟೈನ್ಮೆಂಟ್‌ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತ ಪಾಲಿಕೆಯ ಪೌರ ಕಾರ್ಮಿಕರನ್ನು ಕಾರ್ಮಿಕರನ್ನು ಸನ್ಮಾನಿಸಿದ್ದೇವೆ. ಮಹಿಳೆಯರಿಗೆ ಸೀರೆ, ಪುರುಷರಿಗೆ ಪ್ಯಾಂಟ್‌, ಶರ್ಟ್‌ ನೀಡಿ ಗೌರವಿಸಿದ್ದೇವೆ’ ಎಂದು ತಿಳಿಸಿದರು.

ಕುಟುಂಬದಿಂದ ದೂರ ಉಳಿದರೂ ಕೊರೊನಾ ಸಂಕಷ್ಟದಲ್ಲಿರುವವರ ಸೇವೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.