ADVERTISEMENT

ಮೌಢ್ಯ ತೊಲಗಿಸಲು ವಿಜಯಪುರ ಜಿ.ಪಂ.ಅಧ್ಯಕ್ಷೆ ಸುಜಾತಾ ಅವರಿಂದ 'ಸ್ಮಶಾನ ವಾಸ್ತವ್ಯ'

ಭಯ, ಮೌಢ್ಯಮುಕ್ತ ಸಮಾಜ ನಿರ್ಮಾಣಕ್ಕೆ ಜಿ.ಪಂ.ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಪಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 11:01 IST
Last Updated 13 ಮಾರ್ಚ್ 2021, 11:01 IST
ಸುಜಾತಾ ಕಳ್ಳಿಮನಿ
ಸುಜಾತಾ ಕಳ್ಳಿಮನಿ   

ವಿಜಯಪುರ: ಭಯ ಮತ್ತು ಮೌಢ್ಯಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದತಾಲ್ಲೂಕಿನ ಜುಮನಾಳ ಗ್ರಾಮದ ಸ್ಮಶಾನ(ಖಬರಸ್ಥಾನ)ದಲ್ಲಿ ಮಾರ್ಚ್‌14 ರಂದು ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಬಂಧುತ್ವ ವೇದಿಕೆಯ ಸಹಭಾಗಿತ್ವದಲ್ಲಿ ಸ್ಮಶಾನ ವಾಸ್ತವ್ಯ ಆಯೋಜಿಸಲಾಗಿದೆ ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ, ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜು ಅಲಗೂರ, ವಿಠಲ ಕಟಕದೊಂಡ, ಮಾಜಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ, ಕಾಂಗ್ರೆಸ್‌ ಮುಖಂಡ ಹಮೀದ್‌ ಮುಶ್ರೀಫ್‌ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದಾಗಿ ತಿಳಿಸಿದರು.

ADVERTISEMENT

ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಮಹಾಸ್ವಾಮಿ, ಆಲಮೇಲ ವಿರಕ್ತ ಮಠದ ಜಗದೇವಮಲ್ಲಿ ಬೊಮ್ಮಯ್ಯ ಸ್ವಾಮಿ, ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ, ಅಮೆರಿಕಾದ ವಿಶ್ವ ಬೌದ್ಧ ಮೈತ್ರಿ ಸಂಘದ ಸಲಹೆಗಾರ ಭದಂತ ಧಮ್ಮನಾಗ ಮಹಾಥೇರಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ತಂದೆ ಸ್ಪೂರ್ತಿ

‘ನನ್ನ ತಂದೆ ಹನುಮಂತ ರೊಳ್ಳಿ ಅವರು ವೈದ್ಯಕೀಯ ಸಂಶೋಧನೆಗೆ ತಮ್ಮ ದೇಹ ದಾನ ಮಾಡಿದ್ದರು. ಇದು ನನಗೆ ವೈಜ್ಞಾನಿಕ ಮನೋಭಾವ ಹೊಂದಲು ಪ್ರೇರಣೆಯಾಗಿದೆ’ ಎಂದು ಹೇಳಿ ಬಾವುಕರಾದರು.

‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾದ ಬಳಿಕ ಇಟ್ಟಂಗಿಹಾಳದಲ್ಲಿ ಕುರಿಗಾರರೊಂದಿಗೆ ವಾಸ್ತವ್ಯ, ಉಮರಜದಲ್ಲಿ ನೆರೆ ಸಂತ್ರಸ್ತರೊಂದಿಗೆ ವಾಸ್ತವ್ಯ, ಕಾಖಂಡಕಿಯಲ್ಲಿ ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳೊಂದಿಗೆ ವಾಸ್ತವ್ಯ, ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ, ಅರಕೇರಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ, ಬೋರಗಿಯಲ್ಲಿ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದ್ದು, ಜುಮನಾಳದಲ್ಲಿ ನಡೆಯಲಿರುವ ಸ್ಮಶಾನದಲ್ಲಿ ವಾಸ್ತವ್ಯ ಕೊನೆಯ ಕಾರ್ಯಕ್ರಮವಾಗಲಿದೆ’ ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆ ವಿಜಯಪುರ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪವಾಡಗಳ ರಹಸ್ಯ ಅನಾವರಣ

ಜೀವಂತ ಸಮಾಧಿ, ಬಾನಾಮತಿ, ಗಾಳಿಯಲ್ಲಿ ತೇಲುವುದು, ವಾಮಾಚಾರ, ಮನೆಯ ಮೇಲೆ ಕಲ್ಲು ಬೀಳುವುದು, ಇದ್ದಕ್ಕಿದ್ದಂತೆ ಬೆಂಕಿ ಸೃಷ್ಠಿ, ತಲೆಯ ಮೇಲೆ ಬೆಂಕಿ ಉರಿಸುವುದು, ಗಾಜಿನ ಚೂರುಗಳ ಮೇಲೆ ಕುಣಿತ, ಗಾಜು ತಿನ್ನುವುದು, ಪುನರ್‌ ಜನ್ಮ, ನಾಲಿಗೆಯ ಮೇಲೆ ತ್ರಿಶೂಲ ಸೇರಿದಂತೆ ಇನ್ನಿತರ ಪವಾಡಗಳ ರಹಸ್ಯವನ್ನುಡಾ.ಹುಲಿಕಲ್‌ ನಟರಾಜ್ ಅನಾವರಣಗೊಳಿಸಲಿದ್ದಾರೆ ಎಂದು ಸುಜಾತಾ ಕಳ್ಳಿಮನಿ ಹೇಳಿದರು.

ಚಿಂತನಾ ಗೋಷ್ಠಿ

‘ಮೌಢ್ಯ ಮತ್ತು ಶರಣರ ಚಿಂತನೆ’ ವಿಷಯವಾಗಿ ಪ್ರಗತಿಪರ ಚಿಂತಕ ಡಾ.ಜೆ.ಎಸ್.ಪಾಟೀಲ, ‘ಮೌಢ್ಯ ಮತ್ತು ಮಹಿಳೆ’ ವಿಷಯವಾಗಿ ಲೇಖಕಿ ಪಲ್ಲವಿ ಇಡೂರು, ‘ಮೌಢ್ಯ ಮತ್ತು ಅಂಬೇಡ್ಕರ್‌ ಚಿಂತನೆಗಳು’ ಎಂಬ ವಿಷಯವಾಗಿ ತಾಳಿಕೋಟೆ ಎಸ್‌.ಕೆ.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಜಾತಾ ಚಲವಾದಿ, ‘ಮೌಢ್ಯ ಮತ್ತು ಅಪರಾಧ’ ವಿಷಯವಾಗಿ ವಿಶ್ರಾಂತ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಕೆ.ಉಮೇಶ್‌, ‘ಹಾಸ್ಯದಲ್ಲಿ ವೈಚಾರಿಕ ಚಿಂತನೆ’ ವಿಷಯವಾಗಿ ಇಂದುಮತಿ ಸಾಲಿಮಠ ಚಿಂತನಾ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.